October 18, 2026
Sunday, October 18, 2026
spot_img

ಆಹಾರ ಸರಿಯಿದ್ದರೂ ಆರೋಗ್ಯ ಕೈಕೊಡುತ್ತಿದೆಯೇ? ನಿಮ್ಮ ಈ ಸಣ್ಣ ತಪ್ಪುಗಳೇ ಕಾರಣ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾವು ಪ್ರತಿದಿನ ಎಷ್ಟೇ ಪೌಷ್ಟಿಕಾಂಶಯುತ ಮತ್ತು ಆರೋಗ್ಯಕರ ಆಹಾರ ಸೇವಿಸಿದರೂ, ಕೆಲವೊಮ್ಮೆ ಸಣ್ಣಪುಟ್ಟ ನಿರ್ಲಕ್ಷ್ಯಗಳು ನಮ್ಮ ಸಂಪೂರ್ಣ ಶ್ರಮವನ್ನು ವ್ಯರ್ಥಗೊಳಿಸುತ್ತವೆ. ‘ನಾನು ದಿನವೂ ಒಳ್ಳೆಯ ಆಹಾರ ತಿಂದರೂ ಸುಸ್ತಾಗುತ್ತದೆ, ತೂಕ ಹೆಚ್ಚುತ್ತಿದೆ ಅಥವಾ ಜೀರ್ಣಕ್ರಿಯೆ ಸರಿಯಿಲ್ಲ’ ಎಂದು ಕೊರಗುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಕಾರಣ ಆಹಾರದ ಕೊರತೆಯಲ್ಲ, ಬದಲಾಗಿ ನಾವು ಮಾಡುವ ದೈನಂದಿನ ತಪ್ಪು ಅಭ್ಯಾಸಗಳು.

ಕೆಲಸದ ಗಡಿಬಿಡಿಯಲ್ಲಿ ಬೆಳಗಿನ ಉಪಹಾರ ಅಥವಾ ಮಧ್ಯಾಹ್ನದ ಊಟವನ್ನು ಬಿಟ್ಟುಬಿಡುವುದು ಅನೇಕರ ಅಭ್ಯಾಸ. ಹೀಗೆ ಮಾಡುವುದರಿಂದ ದೇಹದ ಮೆಟಬಾಲಿಸಂ ಮಂದಗತಿಯಾಗುತ್ತದೆ. ಮುಂದಿನ ಬಾರಿ ಊಟ ಮಾಡಿದಾಗ ದೇಹವು ಅದನ್ನು ಕೊಬ್ಬಿನ ರೂಪದಲ್ಲಿ ಶೇಖರಿಸಿಡಲು ಪ್ರಾರಂಭಿಸುತ್ತದೆ. ಇದರಿಂದ ತೂಕ ಇಳಿಯುವ ಬದಲು ಹೆಚ್ಚಾಗುವ ಅಪಾಯವಿರುತ್ತದೆ.

ಎಷ್ಟೇ ಪೌಷ್ಟಿಕ ಆಹಾರ ತಿಂದರೂ ದೇಹದಲ್ಲಿ ಸರಿಯಾದ ಪ್ರಮಾಣದ ನೀರಿಲ್ಲದಿದ್ದರೆ, ಆ ಪೋಷಕಾಂಶಗಳನ್ನು ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುವುದಿಲ್ಲ. ಕನಿಷ್ಠ ನೀರಿನ ಕೊರತೆಯೂ ಸಹ ಸುಸ್ತು, ತಲೆನೋವು ಮತ್ತು ಜೀರ್ಣಕ್ರಿಯೆಯ ತೊಂದರೆಗೆ ಕಾರಣವಾಗುತ್ತದೆ. ಪ್ರತಿದಿನ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯುವುದು ಅತ್ಯಗತ್ಯ.

ಆಹಾರ ಎಷ್ಟು ಮುಖ್ಯವೋ, ರಾತ್ರಿಯ 7-8 ಗಂಟೆಗಳ ನೆಮ್ಮದಿಯ ನಿದ್ರೆಯೂ ಅಷ್ಟೇ ಮುಖ್ಯ. ಸರಿಯಾದ ನಿದ್ರೆ ಇಲ್ಲದಿದ್ದರೆ ದೇಹದಲ್ಲಿ ಹಾರ್ಮೋನ್‌ಗಳ ಸಮತೋಲನ ತಪ್ಪುತ್ತದೆ. ಇದು ಅತಿಯಾದ ಹಸಿವು ಮತ್ತು ಸಿಹಿ ತಿನ್ನುವ ಬಯಕೆಯನ್ನು ಹೆಚ್ಚಿಸಿ, ನಿಮ್ಮ ಹೆಲ್ದಿ ಡಯಟ್ ಅನ್ನು ಹಾಳು ಮಾಡಿತ್ತದೆ.

ಟಿವಿ, ಮೊಬೈಲ್ ನೋಡುತ್ತಾ ಅಥವಾ ಗಡಿಬಿಡಿಯಲ್ಲಿ ಊಟವನ್ನು ಸರಿಯಾಗಿ ಅಗಿಯದೇ ನುಂಗುವುದು ಜೀರ್ಣಕ್ರಿಯೆಗೆ ದೊಡ್ಡ ಹೊಡೆತ ನೀಡುತ್ತದೆ. ಆಹಾರವನ್ನು ಚೆನ್ನಾಗಿ ಅಗಿದು ತಿಂದಾಗ ಮಾತ್ರ ಅದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಲಭಿಸುತ್ತವೆ.

ಕೇವಲ ‘ಆರೋಗ್ಯಕರ ಆಹಾರ’ ತಿಂದರೆ ಸಾಲದು, ಅದನ್ನು ಸೇವಿಸುವ ವಿಧಾನ ಮತ್ತು ನಮ್ಮ ದಿನಚರಿಯ ಅಭ್ಯಾಸಗಳು ಕೂಡ ಸರಿದಾರಿಯಲ್ಲಿರಬೇಕು. ಈ ಸಣ್ಣ ಸಣ್ಣ ತಪ್ಪುಗಳನ್ನು ತಿದ್ದುಕೊಂಡರೆ ಮಾತ್ರ ನಾವು ಸೇವಿಸುವ ಉತ್ತಮ ಆಹಾರ ನಮಗೆ ಪರಿಪೂರ್ಣ ಆರೋಗ್ಯವನ್ನು ನೀಡಬಲ್ಲದು.

Must Read