June 20, 2026
Saturday, June 20, 2026
spot_img

‘ಭಯ ಬೇಡ, ಕಾನೂನು ನಿಮ್ಮೊಂದಿಗಿದೆ’: ಅಂತರ್ಜಾತಿ ನವಜೋಡಿಗೆ ಸರ್ಕಾರದ ಅಭಯ!

ಹೊಸದಿಗಂತ ವರದಿ ಚಿತ್ರದುರ್ಗ:

ಚಿತ್ರದುರ್ಗ ತಾಲ್ಲೂಕಿನ ಚನ್ನಯ್ಯನಹಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಅಂತರ್ಜಾತಿ ವಿವಾಹವಾಗಿದ್ದ ನವಜೋಡಿಯನ್ನು ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಗಳು ಹಾಗೂ ಅಟ್ರಾಸಿಟಿ ಸಮಿತಿ ಸದಸ್ಯರು ಖುದ್ದಾಗಿ ಭೇಟಿ ಮಾಡಿ, ಕಾನೂನು ರಕ್ಷಣೆ ಹಾಗೂ ಇಲಾಖೆಯ ಸೌಲಭ್ಯಗಳ ಭರವಸೆ ನೀಡುವ ಮೂಲಕ ಧೈರ್ಯ ತುಂಬಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಓ.ಪರಮೇಶ್ವರಪ್ಪ ಅವರು ನವಜೋಡಿಯನ್ನು ಭೇಟಿಯಾಗಿ ಮಾತನಾಡಿ, ಯಾವುದೇ ಕಾರಣಕ್ಕೂ ನಿಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬಾರದು, ಅದನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದರು. ಅಲ್ಲದೇ, ಆದಷ್ಟು ಬೇಗ ರಿಜಿಸ್ಟರ್ ಮ್ಯಾರೇಜ್ ಮಾಡಿಸಿಕೊಳ್ಳುವಂತೆ ಸೂಚಿಸಿದ ಅವರು, ‘ನಾವೇ ಮುಂದೆ ನಿಂತು ನಿಮ್ಮ ರಿಜಿಸ್ಟರ್ ಮ್ಯಾರೇಜ್ ಮಾಡಿಸಿಕೊಡುತ್ತೇವೆ. ಸರ್ಕಾರದ ಇಲಾಖೆಯಿಂದ ದೊರೆಯುವ ಧನಸಹಾಯ ಸೇರಿದಂತೆ ಎಲ್ಲಾ ಸೌಲಭ್ಯಗಳು ಹಾಗೂ ಹಾಸ್ಟೆಲ್ ವ್ಯವಸ್ಥೆಯನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಇದನ್ನೂ ಓದಿ:

ಜಿಲ್ಲಾ ಅಟ್ರಾಸಿಟಿ ಸಮಿತಿ ಸದಸ್ಯ ಸಿ.ಎಲ್.ಅವಿನಾಶ್ ಮಾತನಾಡಿ, ಸಮಾನತೆ ನಮ್ಮ ಸಂವಿಧಾನದ ಮೂಲ ಆಶಯವಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಇಷ್ಟದ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸಂಪೂರ್ಣ ಹಕ್ಕನ್ನು ಸಂವಿಧಾನ ನೀಡಿದೆ. ಆದ್ದರಿಂದ ನೀವು ಯಾರಿಗೂ, ಯಾವುದಕ್ಕೂ ಹೆದರಬೇಕಾದ ಅವಶ್ಯಕತೆ ಇಲ್ಲ. ಕಾನೂನು ಸದಾ ನಿಮ್ಮೊಂದಿಗಿರುತ್ತದೆ ಎಂದು ಸಾಂವಿಧಾನಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿದರು.

ಉಪವಿಭಾಗ ಮಟ್ಟದ ಜಾಗೃತಿ ಸಮಿತಿ ಸದಸ್ಯ ರವಿಕುಮಾರ್ ಹಾಗೂ ಬಚ್ಚಬೋರನಹಟ್ಟಿಯ ಬಿ.ಬೋರಯ್ಯ ಮಾತನಾಡಿ, ನೀವಿಬ್ಬರೂ ಧೈರ್ಯವಾಗಿರಿ, ನಾವು ಸದಾ ನಿಮ್ಮ ಜೊತೆಗಿರುತ್ತೇವೆ. ಮುಂದೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಕಾನೂನುಬದ್ಧವಾಗಿ ನಿಮಗೆ ಸಂಪೂರ್ಣ ನೆರವು ನೀಡುತ್ತೇವೆ. ಸದ್ಯಕ್ಕೆ ನಿಮ್ಮ ಗಮನವನ್ನು ವಿದ್ಯಾಭ್ಯಾಸದ ಕಡೆಗೆ ಹರಿಸಿ, ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ನವಜೋಡಿಯ ಕುಟುಂಬಸ್ಥರು ಹಾಗೂ ವರನ ತಂದೆ-ತಾಯಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !