– ಜಗದೀಶ ಎಂ. ಗಾಣಿಗೇರ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಂಕಣವಾಡಿ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಅನುಭವಿಸಿದ್ದ ಸಂಕಷ್ಟ ದೂರ ಮಾಡಲು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ವಂತಿಗೆ ಸಂಗ್ರಹಿಸಿ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರಲ್ ಸೇತುವೆ ನಿರ್ಮಾಣ ಬೇಡಿಕೆ ಈಡೇರಿಸಿಕೊಂಡಿದ್ದಾರೆ.
ಜಮೀನುಗಳಿಗೆ ನದಿಯಿಂದ ದಾಟಿ ಹೋಗಲು ನಿತ್ಯ ಹೆಣಗಾಡಬೇಕಾಗಿತ್ತು. ಸಂಕಷ್ಟಕ್ಕೆ ಸ್ಪಂದಿಸಿ ಎಂದು ನೂರಾರು ಬಾರಿ ಸರ್ಕಾರದ ಮೇಲೆ ಒತ್ತಡ ಹಾಗೂ ಮನವಿ ಸಲ್ಲಿಸಿದರೂ ಸರ್ಕಾರ ಕ್ಯಾರೆ ಎನ್ನದಾಗ ಕಂಕಣವಾಡಿ ರೈತರು ನಿರ್ಧರಿಸಿ ಬ್ಯಾರಲ್ ಸೇತುವೆ ನಿರ್ಮಿಸುವ ಮೂಲಕ ಗಮನ ಸೆಳೆದಿದ್ದಾರೆ. ಕೃಷ್ಣಾ ನದಿಗೆ ಅಡ್ಡಲಾಗಿ 600 ಅಡಿ ಉದ್ದ ಹಾಗೂ 8 ಅಡಿ ಅಗಲ ಸೇತುವೆಯನ್ನು ಬ್ಯಾರಲ್ ಮೂಲಕ ಹಾಗೂ ದಪ್ಪವಾದ ಕಟ್ಟಿಗೆಯ ಫಳಿ ಮತ್ತು ಕಬ್ಬಿಣದ ಸರಳನ್ನು ಉಪಯೋಗಿಸಿ ಸೈ ಎನಿಸಿಕೊಂಡಿದ್ದಾರೆ.
ಈಗ ಸೇತುವೆ ಮೇಲೆ ದ್ವಿಚಕ್ರ ವಾಹನ, ಜನ ಹಾಗೂ ಜಾನುವಾರು ಸಹ ಹೋಗುವಂತಹ ವ್ಯವಸ್ಥೆ ಆಗಿದ್ದು, ರೈತರಿಗೆ ಬಹು ಉಪಯುಕ್ತವಾಗಿದೆ.
25 ಲಕ್ಷ ರೂ. ಸಂಗ್ರಹ:
ಸರ್ಕಾರದಿಂದ ಯಾವುದೇ ಅಪೇಕ್ಷೆ ಹಾಗೂ ನಿರೀಕ್ಷೆ ಇಟ್ಟುಕೊಳ್ಳದೇ ನಮ್ಮ ಸಮಸ್ಯೆ ನಾವೇ ಪರಿಹರಿಸಿಕೊಳ್ಳಬೇಕು ಎಂದು ನಿಶ್ಚಯಿಸಿ ಗ್ರಾಮದಲ್ಲಿನ ರೈತರಿಗೆ ಪ್ರತಿ ಎಕರೆಗೆ ಇಂತಿಷ್ಟು ಹಣ ಎಂದು ನಿಗದಿ ಮಾಡಿ ಸುಮಾರು 25 ಲಕ್ಷ ರೂ.ಗಳನ್ನು ಗ್ರಾಮಸ್ತರೇ ಸಂಗ್ರಹಿಸಿದ್ದಾರೆ. ಇದಲ್ಲದೇ ಅನುಕೂಲಸ್ಥ ರೈತರು ಹೆಚ್ಚಿನ ದೇಣಿಗೆ ನೀಡಿದ್ದು ಇದರಿಂದ ಬ್ಯಾರಲ್ ಸೇತುವೆ ನಿರ್ಮಿಸಲು ಸರಳವಾಯಿತು.
ಕೃಷ್ಣಾ ನದಿಯಲ್ಲಿ ಕಂಕಣವಾಡಿ ಗ್ರಾಮ ಮುಳಗಡೆಯಾಗಿದ್ದು ಇದನ್ನು ಅಭಿವೃದ್ಧಿ ಮಾಡಿದರೆ ಏನು ಪ್ರಯೋಜನ ಎಂದು ಅಧಿಕಾರಿಗಳು, ಸರ್ಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದರು. ಆದರೆ, ರೈತರು ಸೇತುವೆ ಮಾಡಿಯೇ ತೀರುತ್ತೇವೆ ಎಂದು ಹಠ ತೊಟ್ಟು ತಮ್ಮ ಸಮಸ್ಯೆ ತಾವೇ ಈಡೇರಿಸಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಕಂಕಣವಾಡಿ ಗ್ರಾಮ ಮುಳುಗಡೆಯಾದರೂ ಅಲ್ಲಿಯ ಜಮೀನು ಮಾತ್ರ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಡೆಯಾಗಿಲ್ಲ. 500ಕ್ಕೂ ಹೆಚ್ಚು ಎಕರೆ ಜಮೀನು ನಡುಗಡ್ಡೆಯಾಗಿತ್ತು. ಈ ಜಮೀನಿಗೆ ಕೆಲಸ ಮಾಡಲು ಮಹಿಳೆಯರು ಹಾಗೂ ರೈತರು ಹೋಗಲು ತುಂಬ ತೊಂದರೆ ಅನುಭವಿಸುತ್ತಿದ್ದರು. ಗುಹೇಶ್ವರ ಮಂದಿರಕ್ಕೆ ಹೋಗಲು ಸಹ ಅನುಕೂಲವಾಗಿದ್ದಿಲ್ಲ, ಇನ್ನೂ ನಾಲೈದು ತಿಂಗಳು ಕೃಷ್ಣಾ ನದಿಯಲ್ಲಿ ನೀರು ಇರುವುದರಿಂದ ಬೋಟ್ ವ್ಯವಸ್ಥೆ ಕೂಡ ಸರಿಯಾಗಿ ಇರದಿದ್ದ ಕಾರಣ ಅದಕ್ಕೆ ಪರಿಹಾರವಾಗಿ ಬ್ಯಾರಲ್ ಸೇತುವೆ ನಿರ್ಮಿಸಲಾಗಿದೆ.
ನಾವು ರೈತರೆಲ್ಲ ಸ್ವಯಂ ಪ್ರೇರಣೆಯಿಂದ ದುಡ್ಡು ಸಂಗ್ರಹಿಸಿಕೊಂಡು ಬ್ಯಾರಲ್ ಸೇತುವೆ ಮಾಡಿಕೊಂಡಿದ್ದೇವೆ. 4 ಮೇಸ್ತ್ರಿಗಳು ಕೆಲಸ ಮಾಡಿದ್ದು ಬ್ಯಾರಲ್ ಸೇತುವೆ ನಿರ್ಮಾಣದಲ್ಲಿ ರೈತರು ಕೂಡ ಭಾಗಿಯಾಗಿ ಉಚಿತವಾಗಿ ಕೆಲಸ ಮಾಡಿದ್ದರ ಪರಿಣಾಮ ಗುಣಮಟ್ಟದ ಸೇತುವೆ ನಿರ್ಮಿಸಲು ಸಾಧ್ಯವಾಯಿತು ಎಂದು ಗ್ರಾಮದ ರೈತ ಈಶ್ವರ ಕರಬಸಣ್ಣವರ ತಿಳಿಸಿದ್ದಾರೆ.