ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷಕರು ಕೇವಲ ಪಠ್ಯಪುಸ್ತಕ ಮತ್ತು ಸಿಲಬಸ್‌ಗೆ ಸೀಮಿತವಾಗದೆ, ವಿದ್ಯಾರ್ಥಿಗಳ ಜೀವನದ ಭಾಗವಾಗಬೇಕು. ಯಾವುದೇ ಕಾರಣಕ್ಕೂ ಮಗುವಿನೊಳಗಿನ ಬಾಲ್ಯ ಸಾಯಲು ಬಿಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಶಿಕ್ಷಕರಿಗೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಮುನ್ನಾದಿನದಂದು ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತರೊಂದಿಗೆ ನಡೆಸಿದ ವಿಶೇಷ ಸಂವಾದದಲ್ಲಿ ಪ್ರಧಾನಿ, ಶಿಕ್ಷಕರಿಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಮೊಬೈಲ್ ‘ಸ್ಕ್ರೀನ್ ಟೈಮ್’ ಕಡಿಮೆ ಮಾಡಿ
ಇಂದಿನ ದಿನಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಮತ್ತು ಡಿಜಿಟಲ್ ಪರದೆಗಳಿಗೆ ಅಂಟಿಕೊಳ್ಳುತ್ತಿರುವುದು ಒಂದು ದೊಡ್ಡ ವ್ಯಸನವಾಗಿದೆ ಎಂದು ಪ್ರಧಾನಿ ಕಳವಳ ವ್ಯಕ್ತಪಡಿಸಿದರು. ಮಕ್ಕಳ ಸ್ಕ್ರೀನ್ ಟೈಮ್ ಕಡಿಮೆ ಮಾಡಿದರೆ, ಅವರು ಸಹಜವಾಗಿ ಆಟೋಟಗಳ ಕಡೆಗೆ ಗಮನ ಹರಿಸುತ್ತಾರೆ. ಇಲ್ಲಿ ನಾನು ವಿಡಿಯೋ ಗೇಮ್‌ಗಳ ಬಗ್ಗೆ ಹೇಳುತ್ತಿಲ್ಲ, ಬದಲಿಗೆ ಮಕ್ಕಳು ಮೈದಾನಕ್ಕೆ ಇಳಿದು ದೈಹಿಕವಾಗಿ ಆಟ ಆಡುವಂತಾಗಬೇಕು ಎಂದ ಅವರು, ಶಾಲೆಗಳಲ್ಲಿ ಕ್ರಿಯೇಟಿವ್ ಆಕ್ಟಿವಿಟಿಸ್ ಹೆಚ್ಚಿಸುವಂತೆ ಸಲಹೆ ನೀಡಿದರು.
ಮಾದಕ ದ್ರವ್ಯಗಳ ಬಗ್ಗೆ ಶಿಕ್ಷಕರು ಜಾಗೃತರಾಗಿರಬೇಕು
ದೊಡ್ಡ ದೊಡ್ಡ ನಗರಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾದಕ ದ್ರವ್ಯಗಳ ಜಾಲ ಹರಡುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಯಾರೋ ಬಂದು ಮಕ್ಕಳಿಗೆ ಇದನ್ನು ನೀಡಿ ಹೋಗುತ್ತಾರೆ. ಆದ್ದರಿಂದ, ಶಿಕ್ಷಕರು ಮಕ್ಕಳ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಯಾವುದೇ ಮಗುವಿನಲ್ಲಿ ಭಯ ಅಥವಾ ಹಠಾತ್ ಬದಲಾವಣೆ ಕಂಡುಬಂದಲ್ಲಿ ತಕ್ಷಣವೇ ಜಾಗೃತರಾಗಿ ಅವರಿಗೆ ಮಾರ್ಗದರ್ಶನ ನೀಡಬೇಕು ಎಂದು ಪ್ರಧಾನಿ ತಿಳಿಸಿದರು.

ಓದಿನಲ್ಲಿ ಹಿಂದುಳಿದ ಮಕ್ಕಳ ಪ್ರತಿಭೆ ಗುರುತಿಸಿ
ಸಂವಾದದ ವೇಳೆ ಪ್ರಧಾನಿಯವರು, ಓದಿನಲ್ಲಿ ಸರಿಯಾಗಿ ಗಮನ ಹರಿಸದ ಅಥವಾ ಕಡಿಮೆ ಅಂಕ ಗಳಿಸುವ ಮಕ್ಕಳಲ್ಲಿರುವ ಇತರ ಪ್ರತಿಭೆಗಳನ್ನು ಗುರುತಿಸಲು ಶಿಕ್ಷಕರು ಪ್ರಯತ್ನಿಸುತ್ತಾರೆಯೇ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿಕ್ಷಕಿಯೊಬ್ಬರು, “ಖಂಡಿತವಾಗಿಯೂ ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಗುಣ ಹಾಗೂ ಸವಾಲುಗಳಿರುತ್ತವೆ. ಓದಿನಲ್ಲಿ ಹಿಂದುಳಿದ ಮಕ್ಕಳಲ್ಲಿರುವ ವಿಶೇಷ ಕಲೆ ಅಥವಾ ನೈಪುಣ್ಯತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಏಕಲವ್ಯ ಶಾಲೆಗಳಿಂದ ಬದಲಾಗುತ್ತಿದೆ ಬಡ ಮಕ್ಕಳ ಭವಿಷ್ಯ
ಸಂವಾದದಲ್ಲಿ ಪಾಲ್ಗೊಂಡಿದ್ದ ಶಿಕ್ಷಕರೊಬ್ಬರು ಸರ್ಕಾರದ ‘ಏಕಲವ್ಯ ಮಾದರಿ ವಸತಿ ಶಾಲೆಗಳ’ ಯೋಜನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ‘ನೀವು ಕೇವಲ ಶಾಲೆಗಳನ್ನು ತೆರೆದಿಲ್ಲ, ಬದಲಿಗೆ ಇದುವರೆಗೆ ಶಾಲೆಯ ಮುಖವನ್ನೇ ನೋಡದ ಅದೆಷ್ಟೋ ಪ್ರತಿಭಾವಂತ ಹಿಂದುಳಿದ ಕುಟುಂಬಗಳಿಗೆ ಹೊಸ ಆಶಾಕಿರಣ ಮೂಡಿಸಿದ್ದೀರಿ. ಇಂದು ಆ ಬಡ ಕುಟುಂಬಗಳ ಮಕ್ಕಳು ಐಐಟಿ (IIT), ಎನ್‌ಐಟಿ (NIT) ಮತ್ತು ವೈದ್ಯಕೀಯ ಕಾಲೇಜುಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಕನಸು ಕಾಣುತ್ತಿದ್ದಾರೆ’ ಎಂದು ಹೇಳಿದರು.
ಇದನ್ನೂ ಓದಿ:
ಸ್ತನ ಕ್ಯಾನ್ಸರ್ ಜಾಗೃತಿ: ಕಾಶಿ ಮಾದರಿ ನೆನೆದ ಪ್ರಧಾನಿ
ಮತ್ತೊಬ್ಬ ಶಿಕ್ಷಕಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಜಾಗೃತಿ ಮೂಡಿಸುವಲ್ಲಿ ಇರುವ ಸವಾಲುಗಳ ಬಗ್ಗೆ ಮಾತನಾಡಿದರು. ಇಂದಿಗೂ ಮಹಿಳೆಯರು ಈ ಬಗ್ಗೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ನಾನು ಕಾಶಿಯ ಸಂಸದನಾಗಿ ಅಲ್ಲಿನ ಮಹಿಳೆಯರಿಗಾಗಿ ಈ ವಿಶೇಷ ತಪಾಸಣಾ ಅಭಿಯಾನವನ್ನು ಹಮ್ಮಿಕೊಂಡಿದ್ದೆ. ಈಗಿನ ದಿನಗಳಲ್ಲಿ ಮಹಿಳೆಯರು ತಾವಾಗಿಯೇ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿರುವುದು ಸಂತಸದ ತಂದಿದೆ ಎಂದರು.



