ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನ ಬಿಡುವಿಲ್ಲದ ಜೀವನದಲ್ಲಿ ಹಾಸಿಗೆಯಿಂದ ಎದ್ದೇಳುವುದೇ ತಡ, ಓಡಲು ಶುರು ಮಾಡಿದರೆ, ಮತ್ತೆ ಮಲಗುವವವರೆಗೆ ವಿಶ್ರಾಂತಿಯೇ ಇಲ್ಲ. ಮಾನಸಿಕವಾಗಿ, ದೈಹಿಕವಾಗಿ ಬದುಕು ಶಾಂತವಾಗಿರುವುದಿಲ್ಲ. ನಮ್ಮ ದಿನವನ್ನು ಕಿರಿಕಿರಿಯಿಂದ ಪ್ರಾರಂಭಿಸಿದರೆ, ಇಡೀ ದಿನ ನೀರಸವಾಗಿರುತ್ತದೆ. ಆದ್ದರಿಂದ ಪ್ರತಿದಿನವೂ ನೆಮ್ಮದಿಯ ದಿನವಾಗಿರಬೇಕೆಂದರೆ ಎದ್ದ ತಕ್ಷಣ ಕೆಲವನ್ನು ರೂಢಿಸಿಕೊಳ್ಳಬೇಕು, ಕೆಲವೊಂದನ್ನು ತ್ಯಜಿಸಬೇಕು.
ಮೊಬೈಲ್ ಫೋನ್ ಬಳಸಬೇಡಿ
ಬೆಳಗ್ಗೆ ಕಣ್ಣು ತೆರೆಯುತ್ತಿದ್ದಂತೆ ಫೋನ್ ನೋಡುವ ಅಭ್ಯಾಸ ಅನೇಕರಿಗೆ ಇರುತ್ತದೆ. ಕುಡಿಯುವ ನೀರು, ಪುಸ್ತಕಗಳ ಬದಲು ಮೊಬೈಲ್ ಫೋನ್ ತಲೆ ದಿಂಬಿನ ಕೆಳಗಿರುತ್ತದೆ. ಇದು ಸಮಯ ವ್ಯರ್ಥದ ಜೊತೆಗೆ ಆಯಾಸ, ತಲೆಯಲ್ಲಿ ಭಾರವನ್ನು ಉಂಟುಮಾಡುತ್ತದೆ.
ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ
ಬೇಗನೆ ಎದ್ದ ಕೂಡಲೇ ಶಾಂತಚಿತ್ತರಾಗಿ ದೇವರನ್ನು ಸ್ಮರಿಸುತ್ತಾ ದಿನ ಪ್ರಾರಂಭಿಸಿ, ಬೇಡವಾದುದೆಲ್ಲವನ್ನು ತಲೆಯಲ್ಲಿ ತುಂಬಿಕೊಂಡರೆ, ಆ ದಿನವೆಲ್ಲಾ ನೆಮ್ಮದಿನ ಬದುಕು ನಿಮ್ಮದಾಗುವುದಿಲ್ಲ.
ವ್ಯಾಯಾಮ ಮಾಡಿ
ಹೆಚ್ಚಿನ ಜನರು ಬೆಳಿಗ್ಗೆ ಎದ್ದ ನಂತರ ವ್ಯಾಯಾಮವನ್ನು ತಪ್ಪಿಸುತ್ತಾರೆ. ಮೊಬೈಲ್, ಟಿವಿ ನೋಡುವ ಬದಲು ವ್ಯಾಯಾಮ, ಪೇಪರ್ ಓದುವಂತಹ ಅಭ್ಯಾಸ ರೂಢಿಸಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು.
ಖಾಲಿ ಹೊಟ್ಟೆಯಲ್ಲಿರಿ
ಅನೇಕ ಜನರು ಬೆಳಿಗ್ಗೆ ಬೇಗನೆ ಎದ್ದ ಕೂಡಲೇ ಹಲ್ಲುಜ್ಜದೆಯೇ ಕಾಫಿ,ಟೀಗಳಿಗೆ ದಾಸರಾಗುತ್ತಾರೆ. ಎದ್ದ ಕೂಡಲೇ ಸ್ವಲ್ಪ ಹೊತ್ತು ಖಾಲಿ ಹೊಟ್ಟೆಯಲ್ಲಿರಿ, ಹಲ್ಲುಜ್ಜಿ, ಬಿಸಿನೀರು ಕುಡಿದು, ವ್ಯಾಯಾಮದ ನಂತರ ತಿಂಡಿ ಸೇವಿಸಿದರೆ ಆರೋಗ್ಯಕ್ಕೂ ಒಳ್ಳೆಯದು, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರವಿರಬಹುದು.
ಯೋಜನೆಯೊಂದಿಗೆ ಕೆಲಸ ಮಾಡಿ
ಯಾವುದೇ ಯೋಜನೆ ಇಲ್ಲದೆ ದಿನವನ್ನು ಪ್ರಾರಂಭಿಸುವ ಅನೇಕ ಜನರಿದ್ದಾರೆ. ಅಂತಹ ಜನರು ಯಾವಾಗಲೂ ಒತ್ತಡ, ಆತಂಕ ಮತ್ತು ಪ್ರಕ್ಷುಬ್ಧತೆಯನ್ನು ಹೊಂದಿರುತ್ತಾರೆ. ಅವರು ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬಹುದು. ಅಧಿಕ ರಕ್ತದೊತ್ತಡದಂತಹ ರೋಗಗಳೂ ಬರಬಹುದು. ಹಾಗಾಗಿಯೇ ಬೆಳಗ್ಗೆ ನೀವು ಮಾಡಬಹುದಾದ ಕೆಲಸಗಳನ್ನು ಮೊದಲೇ ಪ್ಲಾನ್ ಮಾಡಿ.