ನಾಸೀರ್ ಹುಸೇನ್ ಗೆ ಪ್ರಮಾಣವಚನ ಬೋಧಿಸಬೇಡಿ: ಉಪರಾಷ್ಟ್ರಪತಿಗೆ ನಿವೃತ್ತ ಅಧಿಕಾರಿಗಳ ಪತ್ರ

ಹೊಸದಿಗಂತ ವರದಿ, ಬೆಂಗಳೂರು:

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಘೋಷಣೆ ಕೂಗಿದ ಆರೋಪಿತರಿಗೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರೇ ವಿಧಾನಸೌಧ ಪ್ರವೇಶಕ್ಕೆ ಅನುಮತಿ ಪಾಸ್ ನೀಡಿದ್ದರು. ಹೀಗಾಗಿ ಅವರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿತ್ತು. ಅದರ ಬೆನ್ನಲ್ಲೇ ಪ್ರಕರಣದ ವಿಚಾರಣೆ ಮುಗಿಯುವವರೆಗೂ ನಾಸೀರ್ ಹುಸೇನ್ ಅವರಿಗೆ ಪ್ರಮಾಣವಚನ ಬೋಧಿಸಬಾರದು ಎಂದು ಉಪರಾಷ್ಟ್ರಪತಿಗೆ ಪತ್ರ ಬರೆಯಲಾಗಿದೆ.

ರಾಜ್ಯದ ನಿವೃತ್ತ ಐಎಎಸ್, ಐಪಿಎಸ್ ಹಾಗೂ ಐಆರ್‌ಎಸ್ ಅಧಿಕಾರಿಗಳು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದು ಪ್ರಕರಣದ ವಿಚಾರಣೆ ಮುಗಿಯುವವರೆಗೂ ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಬೋಧಿಸಬಾರದು ಎಂದು ಪತ್ರ ಬರೆದಿದ್ದಾರೆ.

೨೨ ಅಧಿಕಾರಿಗಳಿಂದ ಪತ್ರಕ್ಕೆ ಸಹಿ:
ನಿವೃತ್ತ ಐಎಎಸ್ ಅಧಿಕಾರಿಗಳಾದ ಕೆ. ಶ್ರೀಧರ್ ರಾವ್, ಎಂ.ಮದನ್ ಗೋಪಾಲ್, ಎಂ. ಲಕ್ಷ್ಮೀನಾರಾಯಣ, ಅನಿಲ್ ಕುಮಾರ್, ಮುದ್ದುಮೋಹನ್, ನಿವೃತ್ತ ಐಪಿಎಸ್ ಅಧಿಕಾರಿಗಳಾದ ಭಾಸ್ಕರ್ ರಾವ್, ಗೋಪಾಲ್ ಹೊಸೂರ್, ಐಆರ್‌ಎಸ್ ಅಧಿಕಾರಿಗಳಾದ ಆರ್.ಎಂ.ಎನ್. ಶಾಹಿ, ಜಿ.ವಿ. ಸೂಗುರ್, ಆರ್. ರಾಜು ಸೇರಿದಂತೆ ೨೨ ಅಧಿಕಾರಿಗಳು ಪತ್ರಕ್ಕೆ ಸಹಿ ಹಾಕಿದ್ದಾರೆ.

ರಾಷ್ಟ್ರ ವಿರೋಧಿ ಘೋಷಣೆ ಕೂಗಿರುವ ಪ್ರಕರಣ ಇತ್ಯರ್ಥವಾಗುವರೆಗೂ ಪ್ರಮಾಣ ವಚನ ಬೋಧಿಸದಂತೆ ಮನವಿ ಮಾಡಿದ್ದಾರೆ. ಸುಮಾರು ಮೂರು ಪುಟಗಳ ಪತ್ರ ಬರೆದಿರುವ ಅಧಿಕಾರಿಗಳು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವುದು ದೇಶ ವಿರೋಧಿ ಚಟುವಟಿಕೆಗೆ ಸಮ. ಇದನ್ನು ಗಂಭೀರವಾಗಿ ಪರಿಗಣಿಸಿ ನಾಸೀರ್ ಹುಸೇನ್‌ಗೆ ಅಧಿಕಾರ ಗೌಪ್ಯತೆ ಬೋಧಿಸಬಾರದು. ನಿಮಗಿರುವ ಅಧಿಕಾರವನ್ನು ಚಲಾಯಿಸಿ ಎಂದು ಕೋರಿದ್ದಾರೆ.

ನಾಸೀರ್ ಹುಸೇನ್‌ಗೆ ನೋಟಿಸ್ ಕೊಡಲು ಮುಂದಾದ ಪೊಲೀಸರು:
ಪಾಕಿಸ್ತಾನ್ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೊಹಮ್ಮದ್ ಶಫಿ ನಾಶಿಪುಡಿ ಪೊಲೀಸ್ ಕಸ್ಟಡಿ ಶುಕ್ರವಾರ ಅಂತ್ಯವಾಗಿದ್ದು, ನ್ಯಾಯಾಲಯಕ್ಕೆ ಮತ್ತೆ ಹಾಜರುಪಡಿಸಲಾಗಿತ್ತು. ಸದ್ಯ ಆರೋಪಿಯನ್ನು ೩೯ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದೆ. ಇನ್ನು ವಿಚಾರಣೆ ಹಂತದಲ್ಲಿ ಫುಲ್ ಜೋಶ್‌ನಲ್ಲಿ ಜಿಂದಾಬಾದ್ ಅಂದಿದ್ದು ನಿಜ, ಆದರೆ, ಜಿಂದಾಬಾದ್ ಜಿಂದಾಬಾದ್ ಅಂತ ಗೆಲುವಿನ ಜೋಶ್‌ನಲ್ಲಿ ಜೈಕಾರ ಹಾಕಿದ್ದೆವು. ಆದರೆ, ಪಾಕಿಸ್ತಾನ ಪರ ಘೋಷಣೆ ಮಾತ್ರ ನಾವು ಕೂಗಿಲ್ಲವೆಂದು ಆರೋಪಿ ಹೇಳಿಕೆ ನೀಡಿದ್ದಾನೆ.

ಪ್ರಕರಣ ಸಂಬಂಧ ಬರೋಬ್ಬರಿ ಐವತ್ತಕ್ಕೂ ಹೆಚ್ಚು ಮಂದಿ ಸಾಕ್ಷಿಗಳ ಹೇಳಿಕೆಯನ್ನು ವಿಧಾನಸೌಧ ಠಾಣೆ ಪೊಲೀಸರು ದಾಖಲಿಸಿ ಕೊಂಡಿದ್ದಾರೆ. ಪ್ರಮುಖವಾಗಿ ಭದ್ರತೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಯಿಂದ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಎಲ್ಲರನ್ನು ಸಾಕ್ಷಿಗಳಾಗಿ ಪೊಲೀಸರು ಪರಿಗಣಿಸಿದ್ದು, ಅಲ್ಲದೇ, ಇನ್ನೆರಡು ದಿನದಲ್ಲಿ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್‌ಗೆ ನೋಟಿಸ್ ಕೊಡಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!