ಹೊಸದಿಗಂತ ವರದಿ, ದಾವಣಗೆರೆ:
ಕೆಪಿಸಿಸಿ ಅಧ್ಯಕ್ಷ ಸ್ಥಾನ ಸದ್ಯಕ್ಕಂತೂ ಖಾಲಿಯಾಗಿಲ್ಲ. ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವುದು ಕಾಂಗ್ರೆಸ್ ಹೈಕಮಾಂಡ್ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಸದ್ಯಕ್ಕಂತೂ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಖಾಲಿ ಇಲ್ಲ. ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಏನಾದರೂ ಹೇಳಿದ್ದಾರಾ? ಸುರ್ಜೇವಾಲಾ, ಮಲ್ಲಿಕಾರ್ಜುನ ಖರ್ಗೆಯವರಿಗೆ ದೂರು ಸಲ್ಲಿಸಿರುವ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ಬಾಯಿಯಿಂದ ಏನೇನೋ ಬಿಡಿಸಬೇಡಿ. ದೂರಿನ ಬಗ್ಗೆ
ನನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿಗಳು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ವಿಚಾರವನ್ನು ನಿಮ್ಮ ಮಾಧ್ಯಮಗಳಿಂದಲೇ ನನಗೆ ತಿಳಿದಿದೆ. ಹೈಕೋರ್ಟ್ ಗೆ ನಾವು ಪ್ರಮಾಣಪತ್ರ ನೀಡಿದ್ದೇವೆಂದರೆ ಚುನಾವಣೆ ನಡೆಯುತ್ತದೆಂದೇ ಅರ್ಥ ಎಂದರು.
ರಾಜ್ಯದಲ್ಲಿ ಎಲ್ಲಿಯೂ ಲೋಡ್ ಶೆಡ್ಡಿಂಗ್ ಸಮಸ್ಯೆ ಇಲ್ಲ. ಕೆಲವು ಕಡೆ ನಿರ್ವಹಣೆ ಸಂದರ್ಭದಲ್ಲಿ ತೊಂದರೆಯಾಗಿರಬಹುದು. ವಿದ್ಯುತ್ ದರ ಏರಿಕೆಯಾದ ತಕ್ಷಣ ಗೃಹಜ್ಯೋತಿ ನಿಲ್ಲಿಸಲ್ಲ. ಗೃಹಜ್ಯೋತಿಗೂ, ವಿದ್ಯುತ್ ದರ ಏರಿಕೆಗೂ ಸಂಬಂಧವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗೂ, ಬೆಲೆ ಏರಿಕೆಗೂ ಯಾವುದೇ ಸಂಬಂಧವಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಾಗುತ್ತಿರುವುದು ಕೇಂದ್ರ ಸರ್ಕಾರದಿಂದ. ಕೇಂದ್ರಕ್ಕೆ ರೆವಿನ್ಯೂ ಕೊಡುವುದರಲ್ಲಿ ಕರ್ನಾಟಕವು 2ನೇ ಸ್ಥಾನದಲ್ಲಿದ್ದು, ನಾವು 4 ಲಕ್ಷ ನೀಡಿದರೆ ಕೇಂದ್ರವು ಕೇವಲ 60 ಸಾವಿರ ಕೊಡುತ್ತಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಕಡಿಮೆ ಅನುದಾನ ನೀಡುತ್ತಿರುವ ಬಗ್ಗೆ ರಾಜ್ಯ ಬಿಜೆಪಿಯವರೂ ಕೇಳುತ್ತಿಲ್ಲ, ಮಾಧ್ಯಮಗಳೂ ಅದನ್ನು ಪ್ರಶ್ನಿಸುತ್ತಿಲ್ಲ. ಕೇಂದ್ರ ಸರ್ಕಾರದ ತಪ್ಪು ನೀತಿಯಿಂದಾಗಿ ಬೆಲೆ ಏರಿಕೆಯಾಗುತ್ತದೆ ಎಂದು ಅವರು ಆರೋಪಿಸಿದರು.
ಗೃಹಲಕ್ಷ್ಮೀ ಯೋಜನೆ ಹಣವನ್ನು ನೀಡುತ್ತೇವೆಂದು ಸ್ವತಃ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಮುಖ್ಯಮಂತ್ರಿಗಳ ಮಾತಿನ ಮೇಲೆ ನಂಬಿಕೆ ಇಲ್ಲವೇ? ವರ್ಷಾಂತ್ಯದಲ್ಲಿ ಹೆಚ್ಚು ಹಣ ಬರುತ್ತದೆ. ಮಧ್ಯದಲ್ಲಿ ಸ್ವಲ್ಪ ಹಣ ಕಡಿಮೆ ಬರುತ್ತದೆ. ಆದಾಯ ಬಂದ ತಕ್ಷಣ ಗೃಹಲಕ್ಷ್ಮೀ ಹಣ ಕೊಡುತ್ತೇವೆ. ಭರವಸೆ ನೀಡಿದ ಪ್ರಕಾರ ಸರ್ಕಾರ ಎಲ್ಲವನ್ನೂ ಕೊಡುತ್ತದೆ ಎಂದು ಅವರು ಸಮರ್ಥಿಸಿಕೊಂಡರು.
ಬಿಜೆಪಿಯವರು ಟೀಕೆ ಮಾಡಲಿ. ಅದೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಜನರಿಗೆ ಉಪಯೋಗವಾಗುವ ಇಂತಹ ಒಂದು ಯೋಜನೆ ನೀಡಲಿ. ಒಂದು ತಿಂಗಳು ಸಹ ತಪ್ಪದೇ ಫಲಾನುಭವಿಗಳ ಖಾತೆಗೆ ಹಣ ಹಾಕಲಿ. ಆಗ ಗೊತ್ತಾಗುತ್ತದೆ. ಆನಂತರ ಬಂದು ನಮ್ಮ ಸರ್ಕಾರದ ಮೇಲೆ, ನಮ್ಮ ಮೇಲೆ ಟೀಕೆ ಮಾಡಲಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.