ಮಹಾಕುಂಭ ಮೇಳ ‘ಮೃತ್ಯು ಕುಂಭ’ವಾಗಿ ಮಾರ್ಪಟ್ಟಿದೆ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

‘ಮಹಾ ಕುಂಭವು ‘ಮೃತ್ಯು ಕುಂಭ’ವಾಗಿ ಮಾರ್ಪಟ್ಟಿದೆ’ ಎಂದು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದರು.

ಮಹಾಕುಂಭದ ಸಂದರ್ಭದಲ್ಲಿ ನಡೆದ ಕಾಲ್ತುಳಿತದ ಸಾವುಗಳಿಗೆ ಸಂಬಂಧಿಸಿದಂತೆ ಮತ್ತು ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭದಲ್ಲಿ ಜನಸಂದಣಿಯ ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಾಕುಂಭವನ್ನು “ಮೃತ್ಯು ಕುಂಭ” ಎಂದು ಕರೆದಿರುವ ಮಮತಾ ಬ್ಯಾನರ್ಜಿ ವಿಐಪಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದ್ದರೂ, ಬಡವರಿಗೆ ಅಗತ್ಯ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅವರು, ರಾಷ್ಟ್ರವನ್ನು ವಿಭಜಿಸಲು ಧರ್ಮವನ್ನು ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಕಾರ್ಯಕ್ರಮಕ್ಕೆ ಸರಿಯಾದ ಯೋಜನೆಯ ಕೊರತೆಯಿದೆ ಎಂದು ಅವರು ಆರೋಪಿಸಿದ್ದಾರೆ.

ಇದು ‘ಮೃತ್ಯು ಕುಂಭ’. ನಾನು ಮಹಾ ಕುಂಭವನ್ನು ಮತ್ತು ಪವಿತ್ರ ಗಂಗಾ ಮಾತೆಯನ್ನು ಗೌರವಿಸುತ್ತೇನೆ. ಆದರೆ ಯಾವುದೇ ಸರಿಯಾದ ಪ್ಲಾನ್ ಮಾಡದೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀಮಂತರು ಮತ್ತು ವಿಐಪಿಗಳಿಗೆ 1 ಲಕ್ಷ ರೂ.ಗಳವರೆಗೆ ಶಿಬಿರಗಳನ್ನು (ಟೆಂಟ್‌ಗಳು) ಪಡೆಯಲು ವ್ಯವಸ್ಥೆಗಳಿವೆ. ಆದರೆ ಬಡವರಿಗೆ, ಕುಂಭದಲ್ಲಿ ಯಾವುದೇ ವ್ಯವಸ್ಥೆಗಳಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಯಿಲ್ಲದೆ ಮಹಾಕುಂಭದಿಂದ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳುತ್ತಾರೆ ಮತ್ತು ಅವರಿಗೆ ಪರಿಹಾರವನ್ನು ನಿರಾಕರಿಸಿದ್ದಾರೆ ಎಂದು ಟೀಕಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥರಾದ ಮಮತಾ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿ ತಕ್ಷಣವೇ ತಿರುಗೇಟು ನೀಡಿತು. ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಈ ಬಗ್ಗೆ ಮಾತನಾಡಿದ್ದು, ಮಹಾಕುಂಭವನ್ನು ಮೃತ್ಯು ಕುಂಭ ಎಂದು ಹೇಳಿರುವುದನ್ನು ಹಿಂದುಗಳ ಮೇಲಿನ ದಾಳಿ ಎಂದು ಕರೆದಿದ್ದಾರೆ. ಈ ಬಗ್ಗೆ ಜನರು ತೀವ್ರ ಪ್ರತಿಭಟನೆ ನಡೆಸುವಂತೆ ಒತ್ತಾಯಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!