ʻನಿಮ್ಮ ರಾಜಕೀಯ ಬೆಳವಣಿಗೆಗೆ ಕಾರಣರಾದವರ ಬಗ್ಗೆ ಲಘುವಾಗಿ ಮಾತನಾಡೋದು ತರವಲ್ಲʼ

ಹೊಸದಿಗಂತ ವರದಿ ಅರಸೀಕೆರೆ:

ಶಾಸಕ ಕೆ.ಎಂ.ಶಿವಲಿಂಗೇಗೌಡ ಹೆಚ್‌ಡಿಕೆ ಕುರಿತು ಲಘುವಾಗಿ ಮಾತನಾಡಿದ್ದಕ್ಕೆ ಜೆಡಿಎಸ್ ಮುಖಂಡ ಎಚ್.ಗಂಗಾಧರ್ ವಾಗ್ದಾಳಿ ನಡೆಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಲಿಂಗೇಗೌಡ ಕುಮಾರಸ್ವಾಮಿ ಅವರನ್ನು ಬಿಬಿಎಂಪಿಯಲ್ಲಿ ಕಸ ಎತ್ತಿ ಜೀವನ ನಡೆಸಿದವರು ಎಂದು ಲಘುವಾಗಿ ಮಾತನಾಡಿರುವುದು ಖಂಡನೀಯ ಎಂದರು. ನಿಮ್ಮ ರಾಜಕೀಯ ಜೀವನ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಮಾಜಿ ಸಚಿವ ರೇವಣ್ಣ ಕೊಟ್ಟಿರುವ ಭಿಕ್ಷೆಯಾಗಿದೆ ಎಂಬುದನ್ನು ಮರೆಯಬೇಡಿ ಎಂದರು.

ಶಿವಲಿಂಗೇಗೌಡರೇ ನಿಮ್ಮನ್ನು ಬಾಗೇಶಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿ ಗೆಲ್ಲಿಸುವ ಮೂಲಕ ರಾಜಕೀಯ ಪ್ರವೇಶಕ್ಕೆ ನಾಂದಿ ಹಾಡಿದ್ದು ರೇವಣ್ಣನವರು. ಈ ಹಿಂದೆ ಗಂಡಸಿ ವಿಧಾನಸಭಾ ಚುನಾವಣೆಯಲ್ಲಿ ಸೋತ ಸಂದರ್ಭದಲ್ಲಿ ರಾಮನಗರಕ್ಕೆ ಕರೆದೊಯ್ದು ಗುತ್ತಿಗೆದಾರ ಕೆಲಸ ಕೊಟ್ಟ ಶಿವಲಿಂಗೇಗೌಡರ ಬೆಳವಣಿಗೆಗೆ ಸಾಥ್ ನೀಡಿದವರು ಕುಮಾರಸ್ವಾಮಿಯವರು. ಇಲ್ಲದಿದ್ದರೆ ನೀವು ರಾಜಕೀಯವಾಗಿ ಪ್ರವರ್ಧಮಾನಕ್ಕೆ ಬರಲು ಸಾಧ್ಯ ಆಗುತ್ತಿರಲಿಲ್ಲ, ಇದನ್ನು ಮರೆತು ತಾನು ಬೆಳೆದು ಬಂದ ಮನೆಯನ್ನೇ ಮರೆತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಬಗ್ಗೆ ಅವಹೇಳನಕಾರಿಯಾಗಿ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಜೆಡಿಎಸ್ ಬಿಟ್ಟು ಹೋಗುವುದಿಲ್ಲ ಎಂದು ಕೊನೆಯವರೆಗೂ ನಂಬಿಸಿ ಕೊನೆ ಗಳಿಗೆಯಲ್ಲಿ ಜೆಡಿಎಸ್ ತೊರೆದು ಹೋಗಿ ಮೋಸ ಮಾಡಿದ್ದಾರೆ, ಜೆಡಿಎಸ್ ಪಕ್ಷವನ್ನು ಕತ್ತಲಲ್ಲಿಟ್ಟು ರಾಜಕಾರಣ ಮಾಡಿದ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರು ಜೆಡಿಎಸ್ ವರಿಷ್ಠರ ಬಗ್ಗೆ ಮಾತನಾಡುವ ಹಕ್ಕಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ‌ ನೀಡಿದರು.

ಜೆಡಿಎಸ್ ಮುಖಂಡ ಅಶೋಕ್ ಬಾಣಾವರ ಮಾತನಾಡಿ, ಯಾರೇ ಆಗಲಿ ತನ್ನ ಬೆಳವಣಿಗೆಗೆ ಕಾರಣರಾದವರ ಬಗ್ಗೆ ಲಘುವಾಗಿ ಪರಿಗಣಿಸಬಾರದು. ನಾನೂ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರ ರಾಜಕೀಯ ಗರಡಿಯಲ್ಲಿ ಬೆಳೆದವನು. ಅವರು ಮತ್ತು ನನ್ನ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಬೇಕಾದಷ್ಟು ಇವೆ, ಹಾಗಂತ ನಾನು ಶಾಸಕ ಕೆ. ಎಂ. ಶಿವಲಿಂಗೇಗೌಡರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ, ಅದೇ ರೀತಿ ಶಿವಲಿಂಗೇಗೌಡ ಅವರೂ ತಮ್ಮ ರಾಜಕೀಯ ಏಳಿಗೆಗೆ ಕಾರಣರಾದವರ ಬಗ್ಗೆ ಹೀಗೆ ಮಾತನಾಡಬಾರದು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!