ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾತಾ ವೈಷ್ಣೋದೇವಿ ದೇಗುಲಕ್ಕೆ ತೀರ್ಥಯಾತ್ರೆಗೆ ಮೂಲ ಶಿಬಿರವಾದ ಕತ್ರಾದಲ್ಲಿರುವ ಹೋಟೆಲ್‌ನಲ್ಲಿ ಮದ್ಯ ಸೇವಿಸಿದ್ದಕ್ಕಾಗಿ ಎಂಟು ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮ ಪ್ರಭಾವಿ ಓರ್ಹಾನ್ ಅವತ್ರಮಣಿ ಸೇರಿ 8 ಮಂದಿ ಮದ್ಯ ಸೇವಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ’ ಎಂಟು ಜನರ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಮತ್ತು ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಅವರನ್ನು ಬಂಧಿಸಲು ತಂಡವನ್ನು ರಚಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋಟೆಲ್‌ನಲ್ಲಿ ತಂಗಿದ್ದ ಕೆಲವು ಅತಿಥಿಗಳು ನಿಯಮಗಳನ್ನು ಉಲ್ಲಂಘಿಸಿ ಆವರಣದಲ್ಲಿ ಮದ್ಯ ಸೇವಿಸುತ್ತಿರುವುದು ಕಂಡುಬಂದಿದೆ ಎಂದು ಮಾರ್ಚ್ 15 ರಂದು ಕತ್ರಾ ಪೊಲೀಸ್ ಠಾಣೆಗೆ ದೂರು ಬಂದಿತ್ತು.
ನಂತರ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮಾತಾ ವೈಷ್ಣೋದೇವಿ ದೇಗುಲದ ಸಾಮೀಪ್ಯದಿಂದಾಗಿ ಹೋಟೆಲ್ ಒಳಗೆ ಮದ್ಯ ಮತ್ತು ಮಾಂಸಾಹಾರ ನಿಷೇಧಿಸಲಾಗಿದೆ ಎಂದು ಹೇಳಿದ್ದರೂ, ಓರ್ಹಾನ್ ಅವತ್ರಮಣಿ, ದರ್ಶನ್ ಸಿಂಗ್, ಪಾರ್ಥ್ ರೈನಾ, ರಿತಿಕ್ ಸಿಂಗ್, ರಾಶಿ ದತ್ತ, ರಕ್ಷಿತಾ ಭೋಗಲ್, ಶಗುನ್ ಕೊಹ್ಲಿ ಮತ್ತು ಅನಸ್ತಸಿಲಾ ಅರ್ಜಮಸ್ಕಿನಾ ಹೋಟೆಲ್ ಆವರಣದಲ್ಲಿ ಮದ್ಯ ಸೇವಿಸಿದ್ದಾರೆ ಎಂದು ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.