ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಮ್ ಆದ್ಮಿ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ರಾಜ್ಯಸಭಾ ಸಂಸದ ಸಂದೀಪ್ ಪಾಠಕ್ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಪಂಜಾಬ್‌ನ ಎರಡು ಪ್ರತ್ಯೇಕ ಜಿಲ್ಲೆಗಳಲ್ಲಿ ಪಾಠಕ್ ವಿರುದ್ಧ ಎರಡು ಜಾಮೀನು ರಹಿತ ಎಫ್‌ಐಆರ್‌ಗಳು ದಾಖಲಾಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಮೂಲಗಳ ಪ್ರಕಾರ, ಮಹಿಳೆಯರಿಗೆ ಕಿರುಕುಳ ನೀಡಿದ ಆರೋಪ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳ ಮೇಲೆ ಈ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಸಂಬಂಧ ಸಂದೀಪ್ ಪಾಠಕ್ ಅವರನ್ನು ಬಂಧಿಸಲು ಪಂಜಾಬ್ ಪೊಲೀಸರ ವಿಶೇಷ ತಂಡವು ನವದೆಹಲಿಯಲ್ಲಿರುವ ಅವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿತ್ತು. ಆದರೆ, ಪೊಲೀಸರು ಸ್ಥಳಕ್ಕೆ ತಲುಪುವ ಮೊದಲೇ ಪಾಠಕ್ ಅಲ್ಲಿಂದ ನಿರ್ಗಮಿಸಿದ್ದರು ಎಂದು ತಿಳಿದುಬಂದಿದೆ.
ತನ್ನ ವಿರುದ್ಧದ ಎಫ್‌ಐಆರ್‌ಗಳ ಕುರಿತು ಪ್ರತಿಕ್ರಿಯಿಸಿರುವ ಸಂದೀಪ್ ಪಾಠಕ್, “ನನಗೆ ಯಾವುದೇ ಎಫ್‌ಐಆರ್ ಬಗ್ಗೆ ಮಾಹಿತಿಯಿಲ್ಲ ಅಥವಾ ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ. ನಾನು ಸದಾ ಪ್ರಾಮಾಣಿಕತೆ ಮತ್ತು ಸಮಗ್ರತೆಯಿಂದ ದೇಶಸೇವೆ ಮಾಡಿದ್ದೇನೆ. ನನಗೆ ದೇಶವೇ ಮೊದಲು, ಪಕ್ಷವಲ್ಲ. ನಾನು ದೇಶಕ್ಕೆ ದ್ರೋಹ ಮಾಡುವುದಿಲ್ಲ, ಅಂತಹ ಕೆಲಸಕ್ಕೆ ಅವಕಾಶವನ್ನೂ ನೀಡುವುದಿಲ್ಲ. ನನ್ನ ವಿರುದ್ಧ ಇಂತಹ ಕ್ರಮ ಕೈಗೊಳ್ಳುತ್ತಿರುವುದು ಅವರಲ್ಲಿರುವ ಭಯವನ್ನು ಎತ್ತಿ ತೋರಿಸುತ್ತದೆ,” ಎಂದು ಹೇಳಿದ್ದಾರೆ.
2022ರ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಭರ್ಜರಿ ಗೆಲುವಿನ ಹಿಂದೆ ಸಂದೀಪ್ ಪಾಠಕ್ ಅವರ ತಂತ್ರಗಾರಿಕೆ ಪ್ರಮುಖವಾಗಿತ್ತು. ಏಪ್ರಿಲ್ 2022 ರಿಂದ ರಾಜ್ಯಸಭಾ ಸದಸ್ಯರಾಗಿರುವ ಇವರು, ಪಂಜಾಬ್‌ನ ಚುನಾವಣಾ ಶಿಲ್ಪಿ ಎಂದೇ ಖ್ಯಾತರಾಗಿದ್ದರು. ಮುಂದಿನ ವರ್ಷ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿರುವ ಹೊತ್ತಲ್ಲೇ ಪಾಠಕ್, ರಾಘವ್ ಛಡ್ಡಾ ಸೇರಿದಂತೆ ಆರು ಸಂಸದರು ಬಿಜೆಪಿಗೆ ಜಿಗಿದಿರುವುದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿಗೆ ದೊಡ್ಡ ಹೊಡೆತ ನೀಡಿದೆ.
ಈಗ ಪ್ರಕರಣ ದಾಖಲಾಗಿರುವುದು ರಾಜಕೀಯ ಪ್ರೇರಿತವೋ ಅಥವಾ ತನಿಖೆಯಲ್ಲಿ ಸತ್ಯಾಂಶ ಹೊರಬರಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.



