ನಾಳೆ ಬೆಳಗಾವಿಗೆ ಮಹಾ ಸಚಿವರ ಭೇಟಿ ಅನುಮಾನ: ಈ ಕುರಿತು ಫಡ್ನವಿಸ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಮಹಾರಾಷ್ಟ್ರಗಡಿ ವಿವಾದ ತಾರಕ್ಕೇರಿದ್ದು, ಇದರ ನಡುವೆ ನಾಳೆ ಮಹಾ ಸಚಿವರು ಬೆಳಗಾವಿಗೆ ಹೊರಟು ನಿಂತಿದ್ದು, ಇದೀಗ ನಾಳೆ ಭೇಟಿ ರದ್ದಾಗುವ ಬಗ್ಗೆ ಅನುಮಾನ ಮೂಡಿದೆ. ಈ ಬಗ್ಗೆ ಮಹಾರಾಷ್ಟ್ರ ಡಿಸಿಎಂ ಪರೋಕ್ಷವಾಗಿ ಸುಳಿವು ನೀಡಿದ್ದು, ಸಚಿವರ ಬೆಳಗಾವಿ ಭೇಟಿ ಬಗ್ಗೆ ಸಿಎಂ ನಿರ್ಧರಿಸುತ್ತಾರೆ ಎಂದು ಮುಂಬೈನಲ್ಲಿ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಮುಂಬೈನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ಆಗಲಿ, ಮಹಾರಾಷ್ಟ್ರ ಆಗಲಿ ನಿರ್ಣಯ ಕೈಗೊಳ್ಳಲಾಗುವುದಿಲ್ಲ. ಏನೇ ನಿರ್ಣಯ ಕೈಗೊಳ್ಳಬೇಕಿದ್ದರೂ ಸುಪ್ರೀಂ ಕೋರ್ಟ್ ತಗೆದುಕೊಳ್ಳುತ್ತದೆ. ಈ ಸಂದರ್ಭದಲ್ಲಿ ಯಾವುದೇ ಹೊಸ ವಿವಾದ ಸೃಷ್ಟಿಸುವುದು ಯೋಗ್ಯವಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ನಾಳೆ ಮಹಾಪರಿನಿರ್ವಾಹಣ ದಿನದ ನಿಮಿತ್ತ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡಲಿದ್ದರು. ಸಚಿವರು ಕೈಗೊಂಡ ನಿರ್ಣಯ ಯಾರೂ ತಡೆಯಲು ಸಾಧ್ಯವಿಲ್ಲ. ಆದರೆ ಮಹಾಪರಿನಿರ್ವಾಹಣ ದಿನ ನಾವು ಈ ರೀತಿ ವಾದ ಸೃಷ್ಟಿಸುವುದು ಸರಿಯೇ? ನಾವು ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಈ ಬಗ್ಗೆ ಸಿಎಂ ಏಕನಾಥ್ ಶಿಂಧೆ ಸೂಕ್ತ ನಿರ್ಣಯ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಭವಿಷ್ಯದಲ್ಲಿ ನಾವು ಬೆಳಗಾವಿಗೆ ಹೋಗೋದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ. ಸ್ವತಂತ್ರ್ಯ ಭಾರತದ ಯಾವುದೇ ಪ್ರದೇಶಕ್ಕೆ ಹೋಗಲು ಯಾರೂ ಯಾರನ್ನೂ ತಡೆಯಲಾಗಲ್ಲ. ಮಹಾಪರಿನಿರ್ವಾಹಣ ದಿನ ಇರುವುದರಿಂದ ಬೆಳಗಾವಿ ಭೇಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಂತಿಮ ನಿರ್ಧಾರ ಸಿಎಂ ಕೈಗೊಳ್ಳುತ್ತಾರೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!