Saturday, April 1, 2023

Latest Posts

ವರದಕ್ಷಿಣೆ ಕಿರುಕುಳ: ಡೆತ್ ನೋಟ್ ಬರೆದಿಟ್ಟು ಶಿಕ್ಷಕಿ ಆತ್ಮಹತ್ಯೆ

ಹೊಸ ದಿಗಂತ ವರದಿ, ಹೂವಿನ ಹಡಗಲಿ:

ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ರೀತಿಯಿಂದ ಮನನೊಂದ ಶಿಕ್ಷಕಿಯೋಬ್ಬರು ಡೆತ್ ನೋಟ್ ಬರೆದಿಟ್ಟು ಶಾಲೆಯಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ನಗರದ ಎನ್ ಪಿಎಸ್ ಶಾಲೆಯ ಶಿಕ್ಷಕಿ ಬಸಮ್ಮ ಪರಶೆಟ್ಟಿ ಆತ್ಮಹತ್ಯೆಗೆ ಶರಣಾದವರು. ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ‌ ನೀಡಿ ಪರಿಶೀಲಿಸಿದರು.

ಪತಿಯ ಮನೆಯ ಕಡೆಯವರಿಂದ ವರದಕ್ಷಿಣೆ ಕಿರುಕುಳ ಸೇರಿ ವಿವಿಧ ರೀತಿಯ ಕಿರುಕುಳದಿಂದ ಬೇಸತ್ತು, ಅನಿವಾರ್ಯವಾಗಿ, ಬೇರೆ ಹಾದಿಯಿಲ್ಲದೇ ಆತ್ಮಹತ್ಯೆಗೆ ಶರಣಾಗಿದ್ದೇನೆ, ಈ ಕುರಿತು ಪತಿಯ ಕುಟುಂಬದ ಕೆಲ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ, ನನ್ನ ಪತಿಯೇ ನನ್ನ ಸರ್ವಸ್ವ, ಅವರನ್ನು ಬಿಟ್ಟು ಬದುಕಲು ಸಾಧ್ಯವೇ ಇಲ್ಲ, ಆತ್ಮಹತ್ಯೆ ಮಹಾಪಾಪ ಎಂದು ತಿಳಿದಿದ್ದರೂ ಅವರ ಕುಟುಂಬದ ಸದಸ್ಯರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವೆ ಎಂದು ಡೆತ್ ನೊಟ್ ಬರೆದಿಟ್ಟು ಶಿಕ್ಷಕಿ ಶಾಲೆಯ ಕೊಠಡಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ಹಡಗಲಿ ಠಾಣೆಯಲ್ಲಿ ದಾಖಲಾಗಿದೆ.

ಶವವಿಟ್ಟು ಪ್ರತಿಭಟನೆ: ಶಿಕ್ಷಕಿ ಬಸಮ್ಮ ಪರಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಅವರ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆ ಎದುರು ಜಮಾಯಿಸಿದರು. ಈ ವೇಳೆ ಶಿಕ್ಷಕಿ ಬಸಮ್ಮ ಅವರ ಸಾವಿಗೆ ಅವರ ಗಂಡನ ಮನೆಯವರೇ ಕಾರಣ, ಕೂಡಲೇ ಅವರನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಶಿಕ್ಷಕಿ ಮನೆ ಕಡೆಯವರು, ಸಂಬಂಧಿಕರು ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಬಸಮ್ಮ ಅವರ ತಾಯಿ ಪುಷ್ಪಾವತಿ ಎನ್ನುವವರು ಠಾಣೆಯಲ್ಲಿ ದೂರು ನೀಡಿದ್ದು, ವಿಚಾರಣೆ ಮುಂದುವರೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!