ಯುರೋಪ್ ನ ಬತ್ತಿದ ನದಿಯಲ್ಲಿ ಕಂಡಿವೆ ಹಿಟ್ಲರ್ ಕಾಲದ ಯುದ್ಧ ನೌಕೆಗಳು!

ಹೊಸಗಂತ ಡಿಜಿಟಲ್‌ ಡೆಸ್ಕ್
ಯುರೋಪ್ ದಾಖಲೆಯ ಶಾಖದ ಅಲೆಯನ್ನು ಅನುಭವಿಸುತ್ತಿದೆ. ಖಂಡವು 500 ವರ್ಷಗಳಲ್ಲಿ ಕಂಡು ಕೇಳರಿಯದ ಭೀಕರ ಬರದತ್ತ ಸಾಗುತ್ತಿದೆ ಎಂದು ಉನ್ನತ ವಿಜ್ಞಾನಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ. ಖಂಡದ ಬೃಹತ್ ಡ್ಯಾನ್ಯೂಬ್ ನದಿಯ ಹರಿವಿನ ಉದ್ದಕ್ಕೂ ನೀರಿನ ಮಟ್ಟವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ ಬರುತ್ತಿವೆ. ಎರಡನೇ ವಿಶ್ವ ಸಮರದ  ಸಮಯದಲ್ಲಿ ಈ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಜರ್ಮನ್ ಸೈನ್ಯಕ್ಕೆ ಸೇರಿದ ಸುಮಾರು ಎರಡು ಡಜನ್ ಹಡಗುಗಳು ಇದೀಗ ಪತ್ತೆಯಾಗಿವೆ.
ರಾಯಿಟರ್ಸ್ ವರದಿಯ ಪ್ರಕಾರ ಯುರೋಪಿನ ಎರಡನೇ ಅತಿ ಉದ್ದದ ನದಿಯಾಗಿರುವ ಡ್ಯಾನ್ಯೂಬ್, ನೈಋತ್ಯ ಜರ್ಮನಿಯ ಬ್ಲಾಕ್‌ ಫಾರೆಸ್ಟ್‌ ಭಾಗದಿಂದ ಪೂರ್ವ ರೊಮೇನಿಯಾದ ಕಪ್ಪು ಸಮುದ್ರದವರೆಗೆ ವ್ಯಾಪಿಸಿದೆ. ಅದರ ನೀರಿನ ಮಟ್ಟವು ಈ ವರ್ಷ ಕಳೆದೊಂದು ಶತಮಾನದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ತಲುಪಿದೆ. ಅದೇ ರೀತಿಯಾಗಿ ಹಂಗೇರಿಯ ರಾಜಧಾನಿಯಿಂದ ದಕ್ಷಿಣಕ್ಕೆ ಸುಮಾರು 380 ಮೈಲುಗಳಷ್ಟು ದೂರದಲ್ಲಿ, ಸರ್ವಿಯಾದ ಪ್ರಹೋವೊ ಬಳಿ ಡ್ಯಾನ್ಯೂಬ್ ಹರಿವಿನ ಉದ್ದಕ್ಕೂ ನೀರು ಕಡಿಮೆಯಾಗಿದೆ. ಇದರಿಂದಾಗಿ ಕಪ್ಪು ಸಮುದ್ರದಲ್ಲಿ ನಾಜಿ ಜರ್ಮನಿಯ ನೌಕಾಪಡೆಯ 20 ಕ್ಕೂ ಹೆಚ್ಚು ಹಡಗುಗಳ ಅವಶೇಷಗಳು ಪತ್ತೆಯಾಗಿವೆ. ದ್ವಿತೀಯ ಮಹಾಯುದ್ಧದಲ್ಲಿ ಸೋವಿಯತ್ ಪಡೆಗಳಿಂದ ಹಿಮ್ಮೆಟ್ಟಿದ್ದ ಈ ನೌಕೆಗಳು ಇಲ್ಲಿನ ಜಲಮಾರ್ಗದ ಮೂಲಕ ಪ್ರಯಾಣಿಸುತ್ತಿದ್ದವು.

ಒಂದು ವರದಿಯ ಪ್ರಕಾರ, ಇಂತಹ ಮುಳುಗಿದ ನೂರಾರು ಜರ್ಮನ್ ಯುದ್ಧನೌಕೆಗಳು ಡ್ಯಾನ್ಯೂಬ್ ನದಿಯ ಉದ್ದಕ್ಕೂ ಹರಡಿಕೊಂಡಿವೆ. ನೀರಿನ ಮಟ್ಟವು ತುಂಬಾ ಕಡಿಮೆಯಾದಾಗ ಇವು ಪತ್ತೆಯಾಗುತ್ತಿವೆ. ಮುಳುಗಿದ ಅನೇಕ ಹಡಗುಗಳಲ್ಲಿ ಭಾರೀ ಪ್ರಮಾಣದ ಮದ್ದುಗುಂಡುಗಳು ಮತ್ತು ಸ್ಫೋಟಕಗಳಿವೆ ಎಂದು ವರದಿ ಹೇಳಿದೆ.
ನದಿಗಳಲ್ಲಿ ನೀರು ಕಡಿಮೆಯಾಗುತ್ತಿರುವುದು ಹಲವಾರು ಸಂಶೋಧನೆಗಳಿಗೆ ಕಾರಣವಾಗಿದೆ. ಇಟಲಿಯಲ್ಲಿ ಈ ತಿಂಗಳ ಆರಂಭದಲ್ಲಿ ಪೊ ನದಿಯು ಬತ್ತಿಹೋಗಿದ್ದರಿಂದ ಸ್ಫೋಟಗೊಳ್ಳದ 1,000-ಪೌಂಡ್ ಬಾಂಬ್ ಪತ್ತೆಯಾಗಿದೆ. ಎರಡನೆಯ ಮಹಾಯುದ್ಧ ಕಾಲದಲ್ಲಿ ಇದನ್ನು ನಗರದ ಮೇಲೆ ಬೀಳಿಸಲಾಗಿತ್ತು. ಅಮೆರಿಕಾದ ಅತಿದೊಡ್ಡ ಜಲಾಶಯವಾದ ಲೇಕ್ ಮೀಡ್‌ನಲ್ಲಿ ನೀರಿನ ಮಟ್ಟವು ದಾಖಲೆಯ ಮಟ್ಟಕ್ಕೆ ಕುಸಿದಿರುವುದರಿಂದ ದಶಕಗಳಷ್ಟು ಹಳೆಯದಾದ ಮಾನವ ದೇಹದ ಅವಶೇಷಗಳು ಪತ್ತೆಯಾಗುತ್ತಿವೆ. ಎರಡನೇ ಮಹಾಯುದ್ಧದ ಕಾಲದಲ್ಲಿ ಮುಳುಗಿದ್ದ ಬೃಹತ್ ದೋಣಿ ಕೂಡ ಅಲ್ಲಿ ಪತ್ತೆಯಾಗಿದೆ. ಯುರೋಪ್ ಮತ್ತು ಉತ್ತರ ಅಮೆರಿಕಾದಾದ್ಯಂತ ನಿರಂತರವಾಗಿ ಕಾಣಿಸಿಕೊಳ್ಳುತ್ತಿರವ ಬರಗಾಲಗಳಿಗೆ ಹವಾಮಾನ ಬದಲಾವಣೆಯೇ ಕಾರಣವೆಂದು ವಿಜ್ಞಾನಿಗಳು ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!