ದೇಶದ ಈ ರಾಜ್ಯಗಳಲ್ಲಿ ಮುಂದುವರೆದಿದೆ ವರುಣಾರ್ಭಟ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ ದೇಶದ ಕೆಲವು ರಾಜ್ಯಗಳಲ್ಲಿ ವರುಣಾರ್ಭಟ ಮುಂದುವರೆದಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ಥವಾಗಿದೆ. ಈ ನಡುವೆ ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಗುಜರಾತ್, ಪುದುಚೇರಿ ಮತ್ತು ಕೇರಳದ ಹಲವಾರು ಭಾಗಗಳು ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆ ಮತ್ತು ಪ್ರವಾಹದಿಂದ ತತ್ತರಿಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ನಿರಂತರ ಮಳೆಯು ಮಧ್ಯಪ್ರದೇಶ ಮತ್ತು ರಾಜಸ್ಥಾನದ ಹಲವಾರು ಭಾಗಗಳಲ್ಲಿ ಪ್ರವಾಹವುಂಟಾಗಿದ್ದು ಸಂಪರ್ಕ-ಸಂವಹನ ವ್ಯವಸ್ಥೆ ಕುಸಿದು ಬಿದ್ದಿದೆ. ಹಲವೆಡೆ ಜೀವಹಾನಿಗಲೂ ವರದಿಯಾಗಿವೆ ಎಂದು ಮೂಲಗಳು ವರದಿ ಮಾಡಿವೆ.

ವಿಪತ್ತು ನಿರ್ವಹಣಾ ತಂಡಗಳು ಕಳೆದ ಎರಡು ದಿನಗಳಲ್ಲಿ 4,300 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿವೆ ಮತ್ತು ಕಳೆದ ಎರಡು ದಿನಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಂದ 2,100 ಜನರನ್ನು ರಕ್ಷಿಸಲಾಗಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ಕೈಗೊಂಡ ನಂತರ ತಿಳಿಸಿದ್ದಾರೆ.

ರಾಜ್ಯ ವಿಪತ್ತು ತುರ್ತು ನಿರ್ವಹಣಾ ಪಡೆ (ಎಸ್‌ಡಿಇಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಅಧಿಕಾರಿಗಳ ತಂಡಗಳಲ್ಲದೆ ಭಾರತೀಯ ವಾಯುಪಡೆಯ (ಐಎಎಫ್) ಎರಡು ಹೆಲಿಕಾಪ್ಟರ್‌ಗಳು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಭೋಪಾಲ್ ಸೇರಿದಂತೆ ಮಧ್ಯಪ್ರದೇಶದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ರಾಜ್ಯ ರಾಜಧಾನಿ ಮತ್ತು ಇತರ ಸ್ಥಳಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ನರ್ಮದಾಪುರಂ, ವಿದಿಶಾ ಮತ್ತು ಗುಣ ಜಿಲ್ಲೆಗಳು ಪ್ರವಾಹಕ್ಕೆ ಸಿಲುಕಿವೆ.

ಮಂಗಳವಾರ ರಾಜಸ್ಥಾನದ ಬರಾನ್ ಮತ್ತು ಬುಂದಿ ಜಿಲ್ಲೆಗಳಲ್ಲಿ ಇಬ್ಬರು ಜನರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಮತ್ತು ಇಬ್ಬರು ನಾಪತ್ತೆಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!