ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಮೂಲಕ ಅಪಾರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಡಾ. ಎಚ್.ಎಸ್.ಶೆಟ್ಟಿ ಅವರು, ಇದೀಗ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಜನ್ನಾಡಿ ಮತ್ತು ಮಣಿಗೇರೆ ಕೊರಗರ ಕಾಲೋನಿಯಲ್ಲಿ ಕೊರಗ ಕುಟುಂಬಗಳಿಗೆ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ 14 ಮನೆಗಳನ್ನು ನಿರ್ಮಿಸಿದ್ದು, ನ. 17 ರಂದು ಲೋಕಾರ್ಪಣೆಗೊಳ್ಳಲಿದೆ.
ಉಡುಪಿ ಪೇಜಾವರ ಮಠದ ಶ್ರೀ ಅಧೋಕ್ಷಜ ತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೂಜಾ ಕೈಂಕರ್ಯ ನೆರವೇರಿಸಲಿದ್ದು, ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹೆಚ್. ಕೆ. ಮುನಿಯಪ್ಪ ಉದ್ಘಾಟಿಸಲಿದ್ದಾರೆ.
ಯಾವ ಮನೆಗಳಿಗೂ ಕಮ್ಮಿ ಇಲ್ಲದ ಈ ತಾರಸೀ ಮನೆಗಳು ನಿಜಕ್ಕೂ ನೋಡಲು ಸುಂದರವಾಗಿವೆ. ಡಬಲ್ ಬೆಡ್ ರೂಮುಗಳು, ವೀಶಾಲವಾದ ಅಡುಗೆ ಕೋಣೆ, ಒಂದು ಹಾಲ್ ಮತ್ತು ಅಟ್ಯಾಚ್ಡ್ ಬಾತ್ ರೂಮುಗಳು ಈ ಮನೆಗಳ ವಿಶೇಷ. ಒಂದೇ ವರ್ಷದಲ್ಲಿ ನಿರ್ಮಾಣಗೊಂಡಿರುವ ಈ ಮನೆಗಳ ನೆಲಕ್ಕೆ ಉತ್ತಮ ಗುಣಮಟ್ಟದ ಟೈಲ್ಸ್ ಗಳನ್ನೂ ಅಳವಡಿಸಲಾಗಿದೆ. ನೀರಿನ ಪೈಪ್ ಲೈನ್ ಅಳವಡಿಕೆ ಮುಕ್ತಾಯಗೊಂಡಿದ್ದು, ವಿದ್ಯುತ್ ಸಂಪರ್ಕ ಇನ್ನೆರಡು ದಿನಗಳಲ್ಲಿ ಮುಗಿಯಲಿದೆ. ಹೆಸರಾಂತ ಗುತ್ತಿಗೆದಾರರಾದ ಕೊಯ್ಕಾಡಿ ಉದಯಕುಮಾರ್ ಶೆಟ್ಟಿ ಮನೆಗಳನ್ನು ಸುಂದರವಾಗಿ ನಿರ್ಮಿಸಿದ್ದಾರೆ.
ದುಡಿಮೆಯ ಪಾಲನ್ನು ಬಡವರಿಗೆ ಹಂಚುವ ಮೂಲಕ ಸಾರ್ಥಕ್ಯವನ್ನು ಕಾಣುತ್ತಿರುವ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ. ಹೆಚ್.ಎಸ್.ಶೆಟ್ಟಿ, ಉಪಾಧ್ಯಕ್ಷ ಹಾಲಾಡಿ ನಾಗರಾಜ್ ಶೆಟ್ಟಿ, ಕಾರ್ಯದರ್ಶಿ ಡಾ. ಸುಮನಾ ಶೆಟ್ಟಿ ಅವರ ಈ ಕಾರ್ಯ ಪ್ರಶಂಸನಾರ್ಹವಾದುದು.