ಹೊಸ ದಿಗಂತ ವರದಿ, ಕಲಬುರಗಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್ ಈಶ್ವರಪ್ಪ ಅವರು ಶರಣಬಸವೇಶ್ವರ ಸಂಸ್ಥಾನದ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪಾಜಿ ಮತ್ತು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‍ಪರ್ಸನ್‍ರಾದ ಮಾತೋಶ್ರೀ ಡಾ.ದಾಕ್ಷಾಯಿಣಿ ಅವ್ವಾಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಈಶ್ವರಪ್ಪ ಅವರು ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರಿಗೆ ಅಲಂಕೃತ ಪೇಟ ತೊಡಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದರು.
ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪುಣ್ಯಾಶ್ರಮದಲ್ಲಿರುವ ಸಂತ ಶರಣಬಸವೇಶ್ವರರ ಸಮಾಧಿಗೆ ಪೂಜೆ ಸಲ್ಲಿಸಿದ ಶ್ರೀ ಈಶ್ವರಪ್ಪ, ಪೂಜ್ಯ ಡಾ.ಅಪ್ಪಾಜಿ ಹಾಗೂ ಡಾ.ಅವ್ವಾಜಿ ಅವರೊಂದಿಗೆ ಸುಮಾರು ಹತ್ತು ನಿಮಿಷ ಮಾತನಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಅವಿನಾಶ ಜಾಧವ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನಿಲಕುಮಾರ ಬಿಡವೆ, ವಿಶ್ವವಿದ್ಯಾಲಯದ ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ಸೇರಿದಂತೆ ಇತರ ಪ್ರಮುಖರು ಉಪಸ್ಥಿತರಿದ್ದರು.