ಡಾ. ಸಚಿನ್ ಭಟ್ಟರಿಗೆ ಕೇಂದ್ರ ಸರ್ಕಾರದ ಸ್ಟಾರ್ಟ್-ಅಪ್ ಅನುದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಶಸ್ತ್ರಚಿಕಿತ್ಸೆಯ ನಂತರ ಅಚಾತುರ್ಯದಿಂದ ದೇಹದಲ್ಲಿ ವೈದ್ಯಕೀಯ ಸ್ಪಂಜು ಹಾಗೂ ಉಪಕರಣಗಳು ಉಳಿಯುವ ಸ್ಥಿತಿಯನ್ನು ಟೆಕ್ಸ್ಟಿಲೋಮಾ ಎನ್ನುತ್ತಾರೆ. ಇದರಿಂದ ಪ್ರಪಂಚದಾದ್ಯಂತ ಪ್ರತಿವರ್ಷ ಸಾವಿರಾರು ಜನರ ಸಾವು ಸಂಭವಿಸುತ್ತದೆ. ದೇಹದಲ್ಲಿ ಉಳಿಯುವ ಬಾಹ್ಯ ಪರಿಕರಗಳು 90% ಸಂದರ್ಭಗಳಲ್ಲಿ ಅಂಗಾಂಗ ವೈಕಲ್ಯಕ್ಕೆ ಕಾರಣವಾದರೆ 30% ಸಂದರ್ಭಗಳಲ್ಲಿ ಸಾವಿಗೂ ಕಾರಣವಾಗುತ್ತದೆ. ಇದನ್ನು ತಡೆಯಲು ಡಾ. ಸಚಿನ್ ಭಟ್ಟ ಅವರು ಅಭಿವೃದ್ಧಿಪಡಿಸಿದ ಮಾದರಿಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಹನ್ನೊಂದು ಲಕ್ಷ ರೂಪಾಯಿಗಳ ಮೇಕ್ ಇನ್ ಇಂಡಿಯಾ ಸ್ಟಾರ್ಟ್-ಅಪ್ ಅನುದಾನವನ್ನು ಮಂಜೂರು ಮಾಡಿದೆ.
ಡಾ. ಸಚಿನ್ ಭಟ್ಟ ಮೂಲತಃ ಉತ್ತರ ಕನ್ನಡದ ಶಿರಾಲಿಯವರು. ಪ್ರಸ್ತುತ ಕುಮಟಾದ ಅಳ್ವೇಕೋಡಿಯಲ್ಲಿ ನೆಲೆಸಿರುವ ನಿವೃತ್ತ ಬ್ಯಾಂಕ್ ಉದ್ಯೋಗಿ ಸದಾಶಿವ ಭಟ್ಟ ಹಾಗೂ ಶಿಕ್ಷಕಿ ಶೈಲಜಾ ಭಟ್ಟರ ಪುತ್ರ. ಕುಮಟಾದಲ್ಲಿ ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪಡೆದರು. ನಂತರ ಭಟ್ಕಳದ ಅಂಜುಮಾನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಹಾಗೂ ನಿಟ್ಟೆಯಲ್ಲಿ ಎಮ್.ಟೆಕ್ ಶಿಕ್ಷಣವನ್ನು ಪೂರೈಸಿದ ಸಚಿನ್ ಭಟ್ಟರು ಆಳಕಲಿಕೆಯ ಸಂಶೋಧನೆಗಾಗಿ ಬೆಂಗಳೂರಿನ ರೇವಾ ವಿಶ್ವವಿದ್ಯಾನಿಲಯದಿಂದ ಪಿ.ಎಚ್‌ ಡಿ ಪದವಿ ಪಡೆದಿದ್ದಾರೆ. ಮಾಹಿತಿ ತಂತ್ರಜ್ಞಾನ, ಶೈಕ್ಷಣಿಕ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹತ್ತುವರ್ಷಗಳ ಅನುಭವ ಹೊಂದಿದ್ದು ಈಗ ಉಡುಪಿಯ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ವಿದ್ಯಾಲಯದಲ್ಲಿ ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೃತಕ ಬುದ್ಧಿಮತ್ತೆ, ಡೇಟಾ ಅನಾಲಿಟಿಕ್ಸ್, ಭಾಷಾಶಾಸ್ತ್ರ, ಇತಿಹಾಸ, ಶಾಸನಶಾಸ್ತ್ರ ಹೀಗೆ ಹತ್ತು ಹಲವು ವಿಭಾಗಗಳಲ್ಲಿ ಅಪಾರ ಆಸಕ್ತಿಯುಳ್ಳ ಇವರ ಎಪ್ಪತ್ತಕ್ಕೂ ಹೆಚ್ಚಿನ ಸಂಶೋಧನಾ ಪ್ರಬಂಧಗಳು ಹಾಗೂ ಪುಸ್ತಕಾಧ್ಯಾಯಗಳು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ.
ಕನ್ನಡ ಪಠ್ಯಸರಳೀಕರಣಕ್ಕೆ ಮೊದಲ ಬಾರಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿದ್ದಕ್ಕಾಗಿ ಟೆಕ್ವಿಪ್ ಪುರಸ್ಕಾರ, ಕರ್ನಾಟಕ ಕರಾವಳಿಯ ಅಳಿವೆಗಳಲ್ಲಿ ಮುಂದಿನ ನೂರು ವರ್ಷಗಳಲ್ಲಿ ಉಂಟಾಗಬಹುದಾದ ನದಿಮುಖದ ಬದಲಾವಣೆಯ ಬಗೆಗಿನ ವಿಶ್ಲೇಷಣೆಗೆ ಇಸ್ರೋದಿಂದ 2021ರ ರಾಷ್ಟ್ರೀಯ ಚಾಂಪಿಯನ್ ಪ್ರಶಸ್ತಿ, ಗ್ರೀನ್ ಥಿಂಕರ್ ಅಂತರ್ರಾಷ್ಟ್ರೀಯ ಸಮುದಾಯದ ಯಂಗ್ ರಿಸರ್ಚರ್ ಅವಾರ್ಡ್, ಕನ್ನಡ ಶಾಸನಗಳಿಗೆ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಲು ವಿಟಿಯುನಿಂದ ವಿಶೇಷ ಸಂಶೋಧನಾ ಅನುದಾನ, ಮಣ್ಣಿನ ಬೇರಿಂಗ್ ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆಯನ್ನು ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ ’ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ 2021’, ಕನ್ನಡದ ಸಂಶೋಧನೆಗಳಿಗೆ ಕರ್ನಾಟಕ ತಂತ್ರಜ್ಞಾನ ಅಕಾಡೆಮಿಯಿಂದ ಮೂರು ಸಂಶೋಧನಾ ಅನುದಾನಗಳು, ಹದಿನಾಲ್ಕು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಗಳು ಸೇರಿ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳಿಗೆ ಇವರು ಪಾತ್ರರಾಗಿದ್ದಾರೆ.
ಡಾ. ಸಚಿನ್ ಭಟ್ಟ ಇಪ್ಪತ್ತಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ತಾಂತ್ರಿಕ ಸಂಘಸಂಸ್ಥೆಗಳ ಗೌರವ ಸದಸ್ಯರೂ ಹೌದು. ದೇಶದ ವಿವಿಧ ತಾಂತ್ರಿಕ ವಿದ್ಯಾಲಯ ಹಾಗೂ ಸಮ್ಮೇಳನಗಳಲ್ಲಿ ಇವರ ಉಪನ್ಯಾಸಗಳು ಆಯೋಜನೆಗೊಂಡಿವೆ. ಲಂಡನ್ನಿನ ’ದ ಸೈನ್ಸ್ ಎಂಡ್ ಇನ್‌ಫೊರ್ಮೇಶನ್ ಆರ್ಗನೈಸೇಶನ್ನಿ’ನ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಲೇಖಕರೂ ಆಗಿರುವ ಇವರ ಅನೇಕ ಲೇಖನಗಳು ಕನ್ನಡ, ತೆಲುಗು ಹಾಗೂ ಇಂಗ್ಲೀಷಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹೆಚ್ಚಿನ ಅವಕಾಶಗಳನ್ನರಸಿ ನಗರ ಹಾಗೂ ವಿದೇಶಕ್ಕೆ ತೆರಳುವವರ ಮಧ್ಯೆ ಗ್ರಾಮೀಣ ಭಾಗದಲ್ಲಿದ್ದುಕೊಂಡೇ ಮಾಡಿದ ಇವರ ಸಾಧನೆ ಈಗಿನ ಯುವಕರಿಗೆ ಮಾದರಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!