Wednesday, September 28, 2022

Latest Posts

ಎಡನೀರು ಮಠದಲ್ಲಿ ಡಾ. ರಮಾನಂದ ಬನಾರಿಯವರ ರೋಗ ನಿದಾನ ಸರಳ ವಿಧಾನ ಕೃತಿ ಬಿಡುಗಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕುಟುಂಬ ವೈದ್ಯರಾಗಿ ಜನರ ಸ್ವಾಸ್ಥ್ಯವನ್ನು ಕಾಪಾಡಿರುವುದಲ್ಲದೆ, ಕವಿಯಾಗಿ ಸಾಹಿತ್ಯ ಕೃತಿಗಳ ಮೂಲಕ ಜನರ ಮನಸ್ಸಿನ ಸ್ವಾಸ್ಥ್ಯವನ್ನು ಕಾಪಾಡಿಕೊಂಡು ಬರುತ್ತಿರುವ ಡಾ.ಬನಾರಿಯವರು ರೋಗ ನಿದಾನ ಸರಳ ವಿಧಾನ ಎಂಬ ಉತ್ತಮವಾದ ಶೀರ್ಷಿಕೆಯೊಂದಿಗೆ ಪುಸ್ತಕವನ್ನು ಹೊರತಂದಿದ್ದಾರೆ. ತನ್ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ ಎಂದು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ನುಡಿದರು.
ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘ ಮತ್ತು ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘ ದೇಲಂಪಾಡಿ ಇವುಗಳ ಜಂಟಿ ಆಶ್ರಯದಲ್ಲಿ ಚಾತುರ್ಮಾಸ್ಯ ಸಮಿತಿಯ ಸಹಕಾರದೊಂದಿಗೆ ಎಡನೀರು ಮಠದ ಚಾತುರ್ಮಾಸ್ಯ ವೇದಿಕೆಯಲ್ಲಿ ಗುರುವಾರ ಜರಗಿದ ಡಾ. ರಮಾನಂದ ಬನಾರಿ ೮೨ `ರೋಗ ನಿದಾನ ಸರಳ ವಿಧಾನ’ ಕೃತಿಬಿಡುಗಡೆ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು. ಕಾಸರಗೋಡಿನಲ್ಲಿ ಯಾವಾಗಲೂ ಕನ್ನಡಿಗರು ಸಮಸ್ಯಯೊಂದಿಗೆ ಬದುಕುವಂತಾಗಿದ್ದು ಪ್ರತಿದಿನವೂ ಕನ್ನಡಕ್ಕಾಗಿ ಹೋರಾಡಬೇಕಾಗಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲ ಕೃತಿಯನ್ನು ಪಡೆದುಕೊಂಡು ಮಾತನಾಡಿ ೮೨ ವರ್ಷಗಳ ಕಾಲ ತಮ್ಮ ಬದುಕನ್ನು ಸವೆಸಿ ಸುದೀರ್ಘವಾದ ಸೇವೆಯನ್ನು ನೀಡಿ, ಸಮಾಜದ ಓರೆಕೋರೆಗಳನ್ನು ಸರಿಪಡಿಸಿ ಬೆಳಕನ್ನು ಚೆಲ್ಲುವ ಕೆಲಸವನ್ನು ಡಾ. ಬನಾರಿಯವರು ಮಾಡಿದ್ದಾರೆ. ಸಾಹಿತಿಗಳು ಅನೇಕ ಜ್ವಲಂತ ಸಮಸ್ಯೆಗಳ ಕುರಿತು ಪುಸ್ತಕವನ್ನು ಬರೆದಿದ್ದಾರೆ. ಜೊತೆಗೆ ಹೋರಾಟ ಮತ್ತು ಕೃತಿಗಳ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಕಾಸರಗೋಡಿನ ಹಿರಿಯ ವೈದ್ಯ ಡಾ. ಬಿ.ಎಸ್.ರಾವ್ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ. ಎ.ಪಿ.ಭಟ್ ಪುತ್ತೂರು ಕೃತಿಪರಿಚಯ ಮಾಡಿದರು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಶುಭಾಶಂಸನೆಗೈದು ಮಾತನಾಡಿ ಬನಾರಿಯವರೊಂದಿಗಿನ ಒಡನಾಟವನ್ನು ಹಂಚಿಕೊಂಡರು. ಹಿರಿಯ ಕುಟುಂಬ ವೈದ್ಯ ಡಾ. ಜಿ.ಕೆ.ಭಟ್ ಸಂಕಬಿತ್ತಿಲು, ಕಾಸರಗೋಡು ಐ.ಎಂ.ಎ. ಅಧ್ಯಕ್ಷ ಡಾ. ನಾರಾಯಣ ನಾಯ್ಕ್ ಮಾತನಾಡಿದರು. ಶ್ರೀ ಎಡನೀರು ಮಠದ ಆಡಳಿತ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ರಾಮಣ್ಣ ಮಾಸ್ತರ್ ವಂದಿಸಿದರು. ಡಾ. ರಾಧಾಕೃಷ್ಣ ಬೆಳ್ಳೂರು, ವಿಶಾಲಾಕ್ಷ ಪುತ್ರಕಳ, ಚಂದ್ರಶೇಖರ ಏತಡ್ಕ ಕಾರ್ಯಕ್ರಮ ನಿರೂಪಣೆಗೈದರು. ಡಾ. ಅನ್ನಪೂರ್ಣ ಏತಡ್ಕ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!