ಡಾ. ಎಸ್.ಆರ್.ವಿಘ್ನರಾಜ್ ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಪ್ರಶಸ್ತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶೋಧಕರು ಮತ್ತು ಲೇಖಕರಾಗಿರುವ ಡಾ. ಎಸ್.ಆರ್. ವಿಘ್ನರಾಜ್ ಅವರು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಮೂಲಕ ನೀಡಲಾಗುವ ಡಾ. ಯು.ಪಿ ಉಪಾಧ್ಯಾಯ ಮತ್ತು ಡಾ. ಸುಶೀಲಾ ಪಿ. ಉಪಾಧ್ಯಾಯ ಸಂಶೋಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ಆಗಸ್ಟ್ 9ರಂದು ಉಡುಪಿ ಎಂ.ಜಿ.ಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಪ್ರಶಸ್ತಿಯು ರೂ. ಹತ್ತು ಸಾವಿರ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.

1958ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಕನ್ಯಾಡಿಯಲ್ಲಿ ಜನಿಸಿದ ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಪೂರೈಸಿ, ಎಂ.ಎ ಸಂಸ್ಕೃತ ಪದವಿಯನ್ನು ಮೈಸೂರು ವಿ.ವಿಯಿಂದ ಪಡೆದರು. ಅಲ್ಲದೆ ಪ್ರಾಕೃತ, ಪತ್ರಿಕೋದ್ಯಮ ಡಿಪ್ಲೋಮ ಹಾಗೂ ಹಸ್ತಪ್ರತಿ ಶಾಸ್ತ್ರದಲ್ಲಿ ಸ್ನಾತಕೋತ್ತರ ಡಿಪ್ಲೋಮ ಪದವಿಯನ್ನೂ ಪಡೆದಿದ್ದಾರೆ. ಮಂಗಳೂರು ವಿ.ವಿಯಿಂದ ‘ಕರ್ನಾಟಕದ ಜೈನ ಸಂಸ್ಕೃತ ಕವಿಗಳು’ ಎಂಬ ಮಹಾಪ್ರಬಂಧಕ್ಕೆ ಪಿಎಚ್‍ಡಿ ದೊರಕಿದೆ. ಎಂ.ಜಿ.ಎಂ ಕಾಲೇಜು ಉಡುಪಿಯಲ್ಲಿ ಉಪನ್ಯಾಸಕರಾಗಿ ತನ್ನ ವೃತ್ತಿ ಜೀವನ ಆರಂಭಿಸಿ, ಉಜಿರೆಯ ಎಸ್.ಡಿ.ಎಂನಲ್ಲಿ ಮುಂದುವರಿಸಿ, ಪ್ರಸ್ತುತ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದಲ್ಲಿ ಸಂಶೋಧಕರಾಗಿ, ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತುಮಕೂರು ವಿವಿಯಲ್ಲಿ ಸಂಶೋಧನ ಮಾರ್ಗದರ್ಶಕರೂ ಆಗಿದ್ದಾರೆ.

ಸಂಸ್ಕೃತ ಹಸ್ತಪ್ರತಿಗಳ ಸೂಚಿ’, ‘ಕನ್ನಡ ಹಸ್ತಪ್ರತಿಗಳ ಸೂಚಿ’, ‘ಪ್ರಾಚೀನ ಭಾರತೀಯ ಲಿಪಿಗಳು’, ‘ಕರ್ನಾಟಕದ ಸಂಸ್ಕೃತ ಜೈನ ಕವಿಗಳು’ ಮೊದಲಾದವು ಅವರ ಕೃತಿಗಳು. ‘ಭಾಗವತಾಂತರ್ಗತ ತುಳುರಾಮಾಯಣ’, ‘ಶಬ್ದಬೋಧೆ’, ‘ನಾನಾರ್ಥ ನಿಘಂಟು’ ಮತ್ತು ‘ಆರೋಗ್ಯ ನಿರ್ಣಯ’, ಶ್ರೀ ಗುರುಲಿಂಗ ಮುನಿಪ ರಚಿತ ಭೈರವೇಶ್ವರ ಕಾವ್ಯ ಮೊದಲಾದವು ಅವರ ಸಂಪಾದಿತ ಕೃತಿಗಳು. ತುಳು ಸಾಹಿತ್ಯ ಅಕಾಡೆಮಿಯ ಸನ್ಮಾನ, ಅಖಿಲ ಕರ್ನಾಟಕ ಹನ್ನೆರಡನೆಯ ಹಸ್ತಪ್ರತಿ ಸಮ್ಮೇಳನದಲ್ಲಿ ಗೌರವ ಸಮರ್ಪಣೆ, 22ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮೊದಲಾದವು ಅವರಿಗೆ ಸಂದಿರುವ ಗೌರವ ಸನ್ಮಾನಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!