August 12, 2026
Wednesday, August 12, 2026
spot_img

26 ವರ್ಷಗಳ ಹಿಂದೆ ಇದೇ ದಿನ ಕಿಡ್ನಾಪ್‌ ಆಗಿದ್ರು ಡಾ. ರಾಜ್‌ಕುಮಾರ್‌, ಆ 108 ದಿನಗಳಲ್ಲಿ ಏನೆಲ್ಲಾ ಆಗಿತ್ತು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

26 ವರ್ಷಗಳ ಹಿಂದೆ ಇದೇ ದಿನ ಕಿಡ್ನಾಪ್‌ ಆಗಿದ್ರು ಡಾ. ರಾಜ್‌ಕುಮಾರ್‌ ಅವರನ್ನು ಕಿಡ್ನಾಪ್‌ ಮಾಡಲಾಗಿತ್ತು! ಹೌದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಇತಿಹಾಸದಲ್ಲಿಯೇ ಕರಾಳ ದಿನವಾಗಿತ್ತು.

ಜುಲೈ 30, 2000ರ ಕಪ್ಪು ರಾತ್ರಿಯಲ್ಲಿ ತಮಿಳುನಾಡಿನ ಪ್ರಸಿದ್ಧ ಕಾಡುಗಳ್ಳ, ಮರದ ಕಳ್ಳಸಾಗಣೆದಾರ ವೀರಪ್ಪನ್‌ ಕನ್ನಡದ ಸಾಂಸ್ಕೃತಿಕ ರಾಯಭಾರಿ ಡಾ. ರಾಜ್‌ಕುಮಾರ್‌ ಅವರನ್ನು ಅಪಹರಿಸಿದ್ದರು. ಬೆಳಗ್ಗೆ ಎದ್ದು ನ್ಯೂಸ್‌ ನೋಡಿದ ಜನರ ವರನಟ ಡಾ. ರಾಜ್‌ಕುಮಾರ್‌ ಕಿಡ್ನಾಪ್‌ ಎನ್ನುವ ಸುದ್ದಿ ಕೇಳಿ ಬೆಚ್ಚಿಬಿದ್ದಿದ್ದರು. ಇದೇ ಭೀಮನ ಅಮವಾಸ್ಯೆಯ ದಿನ ಕನ್ನಡಾಭಿಮಾನಿಗಳು ರಾಜ್‌ಕುಮಾರ್‌ ಕಿಡ್ನಾಪ್‌ ಸುದ್ದಿ ಕೇಳಿ ಅವರನ್ನು ಈಕೂಡಲೇ ಬಿಡಿಸಿಕೊಂಡು ಬನ್ನಿ ಅವರು ನಮ್ಮ ಕನ್ನಡದ ಆಸ್ತಿ ಎಂದು ಸರ್ಕಾರಕ್ಕೆ ಗೋಗರೆದಿದ್ದರು.

ಕಿಡ್ನಾಪ್‌ ಮಾಡಿದ್ದು ಹೇಗೆ?

ಗಾಜನೂರಿನಲ್ಲಿದ್ದ ತಮ್ಮ ಹುಟ್ಟೂರಿನ ಹೊಸ ಮನೆಯ ಗೃಹಪ್ರವೇಶ ಮಾಡಲು ಡಾ. ರಾಜ್‌ಕುಮಾರ್‌ ತೆರಳಿದ್ದರು. ತಡರಾತ್ರಿ ವೇಳೆ ಜೋರು ಮಳೆ ಸುರಿಯುತ್ತಿತ್ತು. ಇದ್ದಕ್ಕಿದ್ದಂತೆಯೇ ಹೊಸ ಮನೆಯೊಳಗೆ ವೀರಪ್ಪನ್‌ ಹಾಗೂ ಅವರ ಸಹಚರರು ಆಗಮಿಸಿದ್ದರು. ಕೈಯಲ್ಲಿ ಬಂದೂಕು ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿದ್ದ ಕಾರಣ ಯಾರೂ ಏನೂ ಮಾಡಲು ಸಾಧ್ಯವಾಗಿರಲಿಲ್ಲ. ಡಾ. ರಾಜ್‌ಕುಮಾರ್‌, ಅಳಿಯ ಗೋವಿಂದರಾಜ್‌, ನಾಗೇಶ್‌ ಹಾಗೂ ನಿರ್ಮಾಪಕ ನಾಗಪ್ಪ ಅವರನ್ನು ದಟ್ಟ ಅಡವಿಗೆ ಕರೆದುಕೊಂಡು ಹೋಗಿದ್ದರು. ಸ್ಥಳದಲ್ಲೇ ಕಣ್ಣೀರಿಡುತ್ತಾ ನಮ್ಮವರನ್ನು ಬಿಟ್ಟುಬಿಡಿ ಎಂದು ಗೋಗರೆದಿದ್ದ ರಾಜ್‌ಕುಮಾರ್‌ ಪತ್ನಿ ಪಾರ್ವತಮ್ಮ ಅವರ ಕೈಯಲ್ಲಿ ಒಂದು ಕ್ಯಾಸೆಟ್‌ ನೀಡಿ ಇದನ್ನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ ಅವರಿಗೆ ತಲುಪಿಸಿ ಎಂದಿದ್ದರು.

ಏನಿತ್ತು ಅವರ ಬೇಡಿಕೆಗಳು?

ಅಡವಿಯಲ್ಲಿದ್ದ ವೀರಪ್ಪನ್‌ ತನ್ನ ಬೇಡಿಕೆಗಳನ್ನು ಆಡಿಯೋ ಕ್ಯಾಸೆಟ್‌ ಮುಖಾಂತರ ಸರ್ಕಾರಕ್ಕೆ ತಲುಪಿಸುತ್ತಿದ್ದರು. ಅದರಲ್ಲಿ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಬೇಡಿಕೆಗಳು, ಜೈಲಿನಲ್ಲಿದ್ದ ಸಹಚರರ ಬಿಡುಗಡೆ, ತಮಿಳು ಭಾಷೆಗೆ ಸಂಬಂಧಿಸಿದ ಸಾರ್ವಜನಿಕ ಬೇಡಿಕೆಗಳು, ಕೋಟ್ಯಂತರ ರೂಪಾಯಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಸರ್ಕಾರಕ್ಕೆ ಸೂಚನೆ ನೀಡದೇ ಗಾಜನೂರಿಗೆ ಹೋಗಿದ್ದೇ ತಪ್ಪಾಯ್ತಾ?

ವೀರಪ್ಪನ್‌ ರಾಜ್‌ಕುಮಾರ್‌ ಬಗ್ಗೆ ಕಣ್ಣಿಟ್ಟಿರುವ ವಿಚಾರ ಸರ್ಕಾರಕ್ಕೆ ಮೊದಲೇ ತಿಳಿದಂತಿತ್ತು. ಎಸ್‌.ಎಂ ಕೃಷ್ಣ ಸರ್ಕಾರದ ಜೊತೆ ರಾಜ್‌ಕುಮಾರ್‌ ಒಪ್ಪಂದವೊಂದನ್ನು ಮಾಡಿಕೊಂಡಿದ್ದರು. ಹುಟ್ಟೂರು ಗಾಜನೂರಿಗೆ ಎಂದೇ ಹೋಗಬೇಕು ಎಂದಾದರೆ ಸರ್ಕಾರ ಹಾಗೂ ಪೊಲೀಸರಿಗೆ ಅವರು ಮಾಹಿತಿ ನೀಡಬೇಕಿತ್ತು. ಪೊಲೀಸರ ಭದ್ರತೆಯಲ್ಲಿ ಊರಿಗೆ ಹೋಗಿ ಬರಬೇಕಿತ್ತು. ಇದಕ್ಕೆ ರಾಜ್‌ಕುಮಾರ್‌ ಒಪ್ಪಿದ್ದರು. ಆದರೆ ಗಾಜನೂರಿನ ಮನೆ ಗೃಹಪ್ರವೇಶ, ಭೀಮನ ಅಮಾವಾಸ್ಯೆಯ ಮಧ್ಯೆ ಮಾಹಿತಿ ನೀಡುವುದನ್ನು ಮರೆತು ಹೋಗಿದ್ದರು, ಇದೇ ಕ್ಷಣಕ್ಕಾಗಿ ಕಾಯುತ್ತಿದ್ದ ವೀರಪ್ಪನ್‌ ತನ್ನ ಕೆಲಸ ಸಾಧಿಸಿಕೊಂಡಿದ್ದರು.

ಕಾಡಿನ ಜೀವನಕ್ಕೆ ಒಗ್ಗಿಹೋಗಿದ್ದ ವರನಟ

ಎಲ್ಲಿ ನೋಡಿದರೂ ಸಾಕಪ್ಪಾ ಎನಿಸುವಷ್ಟು ಹಸಿರು, ನಿಮಿಷ ಬಿಡುವು ನೀಡದೇ ಸುರಿಯುವ ಮಳೆ, ಸೊಳ್ಳೆ ಜಿಗಣೆಗಳ ಕಾಟದ ನಡುವೆ ಡಾ. ರಾಜ್‌ಕುಮಾರ್‌ ಈ ಜೀವನಕ್ಕೆ ಒಗ್ಗಿಹೋಗಿದ್ದರು. ಅಲ್ಲಿದ್ದ ರೀತಿಗೆ ತಕ್ಕಂತಹ ಜೀವನಶೈಲಿ ರೂಢಿಸಿಕೊಂಡಿದ್ದರು. ನಿತ್ಯವೂ ಯೋಗ ಪ್ರಾಣಾಯಾಮ ಮಾಡುತ್ತಾ ಕಿಂಚಿತ್ತೂ ಧೈರ್ಯಗೆಡದೆ ಆರೋಗ್ಯದ ಬಗ್ಗೆ ಗಮನಹರಿಸಿದ್ದರು. ಸೌಮ್ಯ ಮಾತುಗಳಿಂದ ಇಡೀ ವೀರಪ್ಪನ್‌ ಗ್ಯಾಂಗ್‌ ಮನಸ್ಸನ್ನು ಗೆದ್ದಿದ್ದರು. ವೀರಪ್ಪನ್‌ ಖುದ್ದು ರಾಜ್‌ಕುಮಾರ್‌ ಅವರ ಫ್ಯಾನ್‌ ಆಗಿದ್ದರು.

108 ದಿನಗಳ ನಂತರ ರಿಲೀಸ್‌

ಮೂರುವರೆ ತಿಂಗಳುಗಳ ನಂತರ ರಾಜ್‌ಕುಮಾರ್‌ರನ್ನು ಬಿಡುಗಡೆ ಮಾಡಲಾಗಿತ್ತು. ಸುದೀರ್ಘ ಕಾಯುವಿಕೆ, ರಾಜಕೀಯ ತಂತ್ರಗಾರಿಕೆಗಳು ಮತ್ತು ರಹಸ್ಯ ಸಂಧಾನಗಳ ನಂತರ, ನವೆಂಬರ್ 15, 2000ರಂದು ವೀರಪ್ಪನ್, ಡಾ. ರಾಜ್‌ಕುಮಾರ್ ಅವರನ್ನು ಯಾವುದೇ ಷರತ್ತಿಲ್ಲದೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದರು. ಬೆಂಗಳೂರಿಗೆ ಸುರಕ್ಷಿತವಾಗಿ ಬಂದಿಳಿದ ನಂತರ ಇಡೀ ಊರಿನಲ್ಲಿ ಸಂಭ್ರಮ ಮನೆಮಾಡಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !