ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಎಂಬ ವೈರಸ್ ಮೂಲಕ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ್ದ ಡ್ರ್ಯಾಗನ್ ರಾಷ್ಟ್ರ ಚೀನಾ, ಇದೀಗ ಮತ್ತೊಂದು ವೈರಸ್ನಿಂದ ತಲ್ಲಣಿಸುತ್ತಿದೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ಅಥವಾ HMPV ವೈರಸ್ನಿಂದಾಗಿ ಚೀನಾದಲ್ಲಿ ಮತ್ತೆ ಟೆನ್ಶನ್ ಶುರುವಾಗಿದೆ.
ಚೀನಾಗೆ ಪಕ್ಕವಿರುವ ಹಾಂಕಾಂಗ್ ನಲ್ಲೂ, ಎರಡು ಕೇಸ್ ವರದಿಯಾಗಿದೆ ಎನ್ನುವ ಮಾಹಿತಿಯಿದೆ.
ಇತ್ತ ತಮ್ಮ ದೇಶದಲ್ಲಿ ಮತ್ತೊಂದು ವೈರಸ್ ಹರಡುತ್ತಿರುವ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಚೀನಾ ಸರ್ಕಾರ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಇದು, ಪ್ರವಾಸೋದ್ಯಮಕ್ಕೆ ಹೊಡೆತ ಬೀಳಬಾರದು ಎನ್ನುವ ದೃಷ್ಟಿಯನ್ನು ಇಟ್ಟುಕೊಂಡು ಹೊರಡಿಸಿದ ಪ್ರಕಟಣೆಯಂತಿದೆ.
ಚೀನಾದ ಆಸ್ಪತ್ರೆಗಳು ತುಂಬಿ ತುಳುಕುತ್ತಿರುವ ದೃಶ್ಯಗಳು ಮತ್ತು ವಿಡಿಯೋಗಳು ಸಾಮಾಜಿಕ ತಾಣದಲ್ಲಿ ಹರಡುತ್ತಿರುವುದರಿಂದ, ಈ ವಿಡಿಯೋಗಳು ವಿಶ್ವಾಸಕ್ಕೆ ಅರ್ಹವಾದ ವಿಡಿಯೋಗಳಲ್ಲ. ಇದು, ಹಳೆಯ ವಿಡಿಯೋಗಳು ಎಂದು ಚೀನಾದ ವಿದೇಶಾಂಗ ಇಲಾಖೆ ಸ್ಪಷ್ಟನೆಯನ್ನು ನೀಡಿದೆ.
ಇಡೀ ವಿಶ್ವದಲ್ಲಿ ಸುಮಾರು ಏಳು ಮಿಲಿಯನ್ ಜನರ ಸಾವಿಗೆ ಕಾರಣವಾಗಿದ್ದ ಕೊರೋನಾದ ಆರಂಭಿಕ ಹಂತದಲ್ಲಿ ಇದೇ ರೀತಿ ಚೀನಾ ಹೇಳಿಕೆಯನ್ನು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು. ವಿಶ್ವವನ್ನು ದಾರಿ ತಪ್ಪಿಸುವ ಹಲವಾರು ಹೇಳಿಕೆಗಳು ಆ ವೇಳೆ ಚೀನಾ ಸರ್ಕಾರದಿಂದ ಬಂದಿತ್ತು. ಆದಾಗ್ಯೂ, ಭಾರತ ಸರ್ಕಾರದ ಆರೋಗ್ಯ ಇಲಾಖೆ ಈ ವಿಚಾರದಲ್ಲಿ ನಿಗಾ ಇಟ್ಟಿದೆ. ಯಾವುದಕ್ಕೂ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ ಎಂದು ಹೇಳಿದೆ.
ಎಚ್ಎಂಪಿವಿ ವೈರಸಿನ ಹಾವಳಿ ಎಂದು ಏನು ಸಾಮಾಜಿಕ ಜಾಲತಾಣದಲ್ಲಿ ಫೋಟೋ,ವಿಡಿಯೋ ವೈರಲ್ ಆಗುತ್ತಿದೆಯೋ, 2001ರ ಘಟನೆಗೆ ಸಂಬಂಧಿಸಿದ್ದು ಮತ್ತು ಐದು ವರ್ಷಗಳ ಹಿಂದಿನ ಕೊರೋನಾ ವೈರಸ್ ವಿದ್ಯಮಾನಕ್ಕೆ ಸಂಬಂಧಿಸಿದ್ದೇ ಹೊರತು, ಈಗಿನ ವೈರಸ್ ದಾಳಿಯದ್ದಲ್ಲ ಎಂದು ಚೀನಾ ಸರ್ಕಾರ ಹೇಳಿದೆ.
ಚಳಿಗಾಲದಲ್ಲಿ ಕೆಮ್ಮು, ಶೀತ, ಜ್ವರ, ನೆಗಡಿ ಮುಂತಾದವು ಹೆಚ್ಚಾಗಿ ಎಲ್ಲರನ್ನೂ ಕಾಡುತ್ತದೆ. ಈ ಅವಧಿಯಲ್ಲಿ ಉಸಿರಾಟದ ಸೋಂಕುಗಳು ಹೆಚ್ಚಾಗುತ್ತವೆ. ಹಾಗಾಗಿ, ವಿಶ್ವದಾದ್ಯಂತ ಸುದ್ದಿಯಾಗಿತ್ತಿರುವ ಎಚ್ಎಂಪಿವಿ ವೈರಸಿನ ಪ್ರಭಾವದದ್ದಲ್ಲ ಎನ್ನುವ ಸ್ಪಷ್ಟನೆಯನ್ನು ನೀಡಿದೆ.
ದೇಶದ ನಾಗರೀಕರು ಮತ್ತು ದೇಶಕ್ಕೆ ಬರುವ ಪ್ರವಾಸಿಗರು ಯಾವುದೇ ರೀತಿಯ ಪ್ಯಾನಿಕ್ ಆಗುವ ಅವಶ್ಯಕತೆಯಿಲ್ಲ. ಇಲ್ಲಿನ ಮತ್ತು ಇಲ್ಲಿಗೆ ಬರುವವರ ಆರೋಗ್ಯದ ಬಗ್ಗೆ ಸರ್ಕಾರಕ್ಕೆ ಕಾಳಜಿಯಿದೆ. ನಮ್ಮ ದೇಶದಲ್ಲಿ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭರವಸೆಯನ್ನು ಚೀನಾ ಸರ್ಕಾರ ನೀಡಿದೆ.
ವೈರಸ್ ಕುರಿತು ಭಯ ಬೇಡ: ಆರೋಗ್ಯ ಇಲಾಖೆ
ಕೊರೋನಾದಲ್ಲಿ ಸಾಕಷ್ಟು ಸಾವು ಸಂಭವಿಸಿದ ದೇಶಗಳಲ್ಲಿ ಭಾರತ ಕೂಡಾ ಒಂದು. ಇದನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ, ಭಾರತೀಯರು ಎಚ್ಎಂಪಿವಿ ವೈರಸ್ ಬಗ್ಗೆ ಪ್ಯಾನಿಕ್ ಆಗುವ ಅವಶ್ಯಕತೆಯಿಲ್ಲ. ಚಳಿಗಾಲದಲ್ಲಿ ಇಂತಹ ರೋಗ ಲಕ್ಷಣಗಳು ಸಾಮಾನ್ಯವಾಗಿ ಕಾಣಿಸುತ್ತದೆ ಎಂದು ಆರೋಗ್ಯ ಇಲಾಖೆಯ ಡೈರೆಕ್ಟರ್ ಜನರಲ್ ಡಾ.ಅತುಲ್ ಗೋಯೆಲ್ ಹೇಳಿದ್ದಾರೆ.
ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಯ ಕೇಸಿನ ಸ್ಟಡಿಯನ್ನು ಡಿಸೆಂಬರ್ 2024 ಅಂತ್ಯದವರೆಗೆ ನಡೆಸಿದ್ದೇವೆ. ನಮ್ಮಲ್ಲಿರುವ ಡೇಟಾದ ಪ್ರಕಾರ, ಈ ರೋಗ ಲಕ್ಷಣದ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಈ ವಿಚಾರದಲ್ಲಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ ಎಂದು ಡಾ. ಗೋಯೆಲ್ ಹೇಳಿದ್ದಾರೆ.