ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿರುವ ನಡುವೆಯೇ, ವಿದೇಶದಲ್ಲಿ ಪ್ರದರ್ಶನದ ವೇಳೆ ಸಿನಿಮಾ ನಿಲ್ಲಿಸಿದ ಘಟನೆ ನಡೆದಿದೆ. ಕೆನಡಾದ ಚಿತ್ರಮಂದಿರವೊಂದರಲ್ಲಿ ಸಿನಿಮಾ ಪ್ರದರ್ಶನದ ವೇಳೆ ಪ್ರೇಕ್ಷಕರು ಆಕ್ರೋಶಗೊಂಡು ಪರದೆಯನ್ನೇ ಹರಿದು ಹಾಕಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಚಿತ್ರವು ಭಾರತ ಸೇರಿದಂತೆ ವಿದೇಶಗಳಲ್ಲಿಯೂ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಕೆಲವೇ ದಿನಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಆದರೆ ಕೆನಡಾದ ಪ್ರಮುಖ ನಗರದಲ್ಲಿನ ಒಂದು ಥಿಯೇಟರ್‌ನಲ್ಲಿ ಪ್ರದರ್ಶನ ನಡೆಯುತ್ತಿದ್ದಾಗ ತಾಂತ್ರಿಕ ತೊಂದರೆಗಳು ಉಂಟಾಗಿದ್ದರಿಂದ ಪ್ರೇಕ್ಷಕರಲ್ಲಿ ಅಸಮಾಧಾನ ಹೆಚ್ಚಾಯಿತು.
ಇದನ್ನೂ ಓದಿ:
ಆರಂಭದಲ್ಲಿ ಕೂಗಾಟಕ್ಕೆ ಸೀಮಿತವಾಗಿದ್ದ ಅಸಮಾಧಾನ, ನಂತರ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಕೆಲವರು ಆಸನಗಳನ್ನು ಕಿತ್ತು ಹಾಕಿದರೆ, ಇನ್ನೂ ಕೆಲವರು ಥಿಯೇಟರ್ ಪರದೆಯನ್ನು ಹರಿದುಹಾಕಿದ್ದಾರೆ. ಈ ಅಘಟನೆಯ ಪರಿಣಾಮವಾಗಿ ಸಿನಿಮಾ ಪ್ರದರ್ಶನವನ್ನು ತಕ್ಷಣವೇ ನಿಲ್ಲಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಕೆನಡಾ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದು, ಜನರನ್ನು ಚಿತ್ರಮಂದಿರದಿಂದ ತೆರವುಗೊಳಿಸಿದರು. ಘಟನೆಗೆ ಸಂಬಂಧಿಸಿದಂತೆ ಕೆಲವರನ್ನು ವಶಕ್ಕೆ ಪಡೆದು, ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಪ್ರಕರಣ ದಾಖಲಿಸಲಾಗಿದೆ.



