ರಾಜ್ಯ ಮಟ್ಟದ ಶಾಲಾ ಹಾಕಿ ಕ್ರೀಡಾಕೂಟಕ್ಕೆ ಮಡಿಕೇರಿಯಲ್ಲಿ ಚಾಲನೆ

ಹೊಸದಿಗಂತ ವರದಿ, ಮಡಿಕೇರಿ:
ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ, ಬಾಲಕಿಯರ ರಾಜ್ಯ ಮಟ್ಟದ ಹಾಕಿ ಪಂದ್ಯಾವಳಿಗೆ ನಗರದ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ಚಾಲನೆ ನೀಡಲಾಯಿತು.
ಅರ್ಜುನ ಪ್ರಶಸ್ತಿ ಪುರಸ್ಕೃತ ಹಾಕಿಪಟು ಎಸ್.ವಿ.ಸುನಿಲ್, ಅಂತರರಾಷ್ಟ್ರೀಯ ಹಾಕಿ ಕ್ರೀಡಾಪಟು ವಿ.ಎಸ್.ವಿನಯ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಸದಸ್ಯ ಎಸ್.ಸಿ.ಸತೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಾಥಮಿಕ, ಪ್ರೌಢಶಾಲಾ, ಬಾಲಕ, ಬಾಲಕಿಯರ ಹಾಕಿ ಪಂದ್ಯಾವಳಿ ಆಯೋಜನೆಗೊಂಡಿದೆ.
ಈ ಸಂದರ್ಭ/ಮಾತನಾಡಿದ ಎಸ್.ವಿ.ಸುನಿಲ್ ಅವರು, ಕ್ರೀಡಾಪಟುಗಳು ಜಿಲ್ಲಾ, ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸುವಂತಾಗಬೇಕು ಎಂದು ಅವರು ಕರೆ ನೀಡಿದರು.
ಕ್ರೀಡಾಪಟುಗಳು ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಆ ನಿಟ್ಟಿನಲ್ಲಿ ಕ್ರೀಡಾಪಟುಗಳು ಶಿಕ್ಷಣ ಮತ್ತು ಕ್ರೀಡೆಯಲ್ಲಿ ಸಮತೋಲನದಿಂದ ತೊಡಗಿಸಿಕೊಳ್ಳಬೇಕು ಎಂದು ಅವರು ಸಲಹೆ ಮಾಡಿದರು.
ಶ್ರಮಕ್ಕೆ ಪ್ರತಿಫಲ ದೊರೆಯುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಪ್ರಯತ್ನ ಇರಬೇಕು ಎಂದು ಎಸ್.ವಿ.ಸುನಿಲ್ ಅವರು ಹೇಳಿದರು. ವಿ.ಎಸ್.ವಿನಯ್ ಅವರು ಮಾತನಾಡಿ, ಯಾವುದೇ ಕ್ರೀಡಾಪಟು, ತಾಲೂಕು, ಜಿಲ್ಲಾ, ರಾಜ್ಯ, ದೇಶ ಹೀಗೆ ಹಂತ ಹಂತವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮುಂದಾಗಬೇಕು. ಕ್ರೀಡೆಯಲ್ಲಿ ಸತತ ಪರಿಶ್ರಮವಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿಂದೆ ಹಾಕಿ ಕ್ರೀಡೆಯಲ್ಲಿ ಕೊಡಗು ಜಿಲ್ಲೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆ ಹಾಗೂ ಕರ್ನಾಟಕ ರಾಜ್ಯದಿಂದ ಹಾಕಿ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದೇ ಕಡಿಮೆಯಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆ ಹಾಗೂ ರಾಜ್ಯದವರು ಭಾರತವನ್ನು ಪ್ರತಿನಿಧಿಸುವಂತಾಗಬೇಕು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೇದಮೂರ್ತಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಸದಾಶಿವಯ್ಯ ಪಲ್ಲೇದ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶ್ರೀನಿವಾಸ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್‍ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಪಿ.ಕೆ.ನಳಿನಿ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸೋಮಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪ್ರವೀಣ್ ಪಿ.ಎ., ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ರವಿಕೃಷ್ಣ, ಮಡಿಕೇರಿ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್ ಕೆ.ಜಿ. ಇತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!