Tuesday, June 6, 2023

Latest Posts

ನೀರ್ಚಾಲಿನಲ್ಲಿ ವೇದಮಂತ್ರ ಘೋಷಗಳೊಂದಿಗೆ ಶ್ರೀಕೃಷ್ಣ ಯುಜುಃಸಂಹಿತಾ ಯಾಗಕ್ಕೆ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವೇದಬ್ರಹ್ಮ ಶ್ರೀ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟರ 80ನೇ ವರ್ಷದ ಸಂದರ್ಭ ಅವರ ಶಿಷ್ಯವೃಂದದವರ ನೇತೃತ್ವದಲ್ಲಿ ನೀರ್ಚಾಲು ಶ್ರೀ ಚಂದ್ರಶೇಖರೇಂದ್ರ ಸರಸ್ವತೀ ವೇದಪಾಠಶಾಲೆಯಲ್ಲಿ ಗುರುವಾರ ವೇದಮಂತ್ರಘೋಷಗಳೊಂದಿಗೆ ಶುಭಮುಹೂರ್ತದಲ್ಲಿ ಶ್ರೀಕೃಷ್ಣ ಯುಜುರ್ವೇದ ತೈತ್ತರೀಯ ಶಾಖಾಮಂತ್ರಸ್ವಾಹಾಕಾರ ಯಜ್ಞ ಆರಂಭವಾಯಿತು.
ಅನೇಕ ಶಿಷ್ಯವೃಂದದವರನ್ನು ಹೊಂದಿದ ವೇದಬ್ರಹ್ಮ ಪಳ್ಳತ್ತಡ್ಕ ವಿಶ್ವೇಶ್ವರ ಭಟ್ಟ ದಂಪತಿಗಳ ಆಶೀರ್ವಾದವನ್ನು ಪಡೆದು ಘನ ವಿದ್ವಾಂಸರು ವೈದಿಕ ಕಾರ್ಯಗಳನ್ನು ಪ್ರಾರಂಭಿಸಿದರು. ಪ್ರಾರಂಭದಲ್ಲಿ ಪುಣ್ಯಾಹ, ದೇವನಾಂದಿ, ನವಗ್ರಹ ಪೂಜೆ, ಕಲಶಪೂಜೆ ಜರಗಿತು. ಸರ್ವತೋಭದ್ರ ಮಂಡಲದಲ್ಲಿ ವೇದಕಲಶ ಪೂಜೆ ನೆರವೇರಿತು.
ಯಜ್ಞದ ಪ್ರಧಾನ ಆಚಾರ್ಯರಾದ ಅಮೈ ಅನಂತಕೃಷ್ಣ ಭಟ್ಟರೊಂದಿಗೆ ಘನ ವಿದ್ವಾಂಸರು ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಭೇಟಿನೀಡಿದ್ದ ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ಪ್ರದೀಪ ಕುಮಾರ ಕಲ್ಕೂರ ಅವರನ್ನು ವಿಶ್ವೇಶ್ವರ ಭಟ್ಟರು ಶಾಲು ಹೊದೆಸಿ ಆಶೀರ್ವದಿಸಿದರು.
ಕಲ್ಕೂರ ಪ್ರತಿಷ್ಠಾನದ ವತಿಯಿಂದ ವಿಶ್ವೇಶ್ವರ ಭಟ್ಟರನ್ನು ಸನ್ಮಾನಿಸಿದ ಪ್ರದೀಪ ಕುಮಾರ ಕಲ್ಕೂರ ಅವರು ಮಾತನಾಡಿ ಎಲ್ಲೇ ಇದ್ದರೂ ಹೇಗೇ ಇದ್ದರೂ ಭಾರತೀಯತೆಯನ್ನು ಉಳಿಸಿಕೊಳ್ಳಬೇಕಿದೆ. ವೇದಾಭ್ಯಾಸದಿಂದ ಧರ್ಮದ ರಕ್ಷಣೆ. ವೇದದ ಸ್ಪಷ್ಟ ಉಚ್ಛಾರಣೆಯಿಂದ ವಾತಾವರಣವು ಪರಿಶುದ್ಧವಾಗುತ್ತದೆ. ವೇದದ ಶಕ್ತಿಯ ಸಾರವು ಪ್ರಪಂಚವನ್ನೇ ಅನುಗ್ರಹಿಸಬಲ್ಲುದು. ವೇದದ ರಕ್ಷಣೆ ವಿಶ್ವದ ಸಂರಕ್ಷಣೆ ಎಂಬುದನ್ನು ನಾವು ಅರಿತಿರಿಬೇಕು ಎಂದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಯಾಗದ ಪ್ರಭಾವಲಯದಲ್ಲಿ ದುಷ್ಟಶಕ್ತಿಗಳು ನೆಲೆನಿಲ್ಲಲಾರದು ಎಂಬ ಮಾತನ್ನು ಹೇಳಿದರು. ಜ.12ರ ತನಕ ಯಾಗವು ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!