Saturday, July 2, 2022

Latest Posts

ಮೊಳಕಾಲ್ಮೂರು ತಾಲ್ಲೂಕು ಮಟ್ಟದ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ ಸಚಿವ ಬಿ.ಶ್ರೀರಾಮುಲು

ಹೊಸ ದಿಗಂತ ವರದಿ, ಚಿತ್ರದುರ್ಗ:

75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮೊಳಕಾಲ್ಮೂರು ತಾಲ್ಲೂಕು ಮಟ್ಟದ ಆರೋಗ್ಯ ಮೇಳಕ್ಕೆ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಚಾಲನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಯುಷ್ ಇಲಾಖೆ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಆರೋಗ್ಯ ಇಲಾಖೆ ವತಿಯಿಂದ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ 176 ತಾಲ್ಲೂಕುಗಳಲ್ಲಿ ಆರೋಗ್ಯ ಮೇಳ ನಡೆಸಲಾಗಿದೆ. ಎಲ್ಲರಿಗೂ ಆರೋಗ್ಯ ಬಹಳ ಮುಖ್ಯವಾಗಿದೆ. ಇದರಿಂದ ಸದೃಢ ಭಾರತ ಹಾಗೂ ಸದೃಢ ಕರ್ನಾಟಕ ನಿರ್ಮಾಣವಾಗಲಿದೆ. ಆರೋಗ್ಯ ಮೇಳ ಆಯೋಜನೆಯಿಂದ ಬಡವರಿಗೆ ಅನುಕೂಲವಾಗಲಿದೆ. ದೇಶದ ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಹೊಂದಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಮಂತ್ರಿಯಾಗಿ ಜನರಿಗೆ ಸಾಕಷ್ಟು ನೆರವು ನೀಡಲಾಗಿದೆ. ಪ್ರಸ್ತುತ ದಿನಗಳಲ್ಲಿ ಈಗಾಗಲೇ 4ನೇ ಅಲೆ ಪ್ರಾರಂಭವಾಗಿದೆ. ಎಲ್ಲರೂ ಕಡ್ಡಾಯ ಮಾಸ್ಕ್ ಧರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ಜಾತಿಬೇಧವಿಲ್ಲದೇ ಪ್ರತಿಯೊಬ್ಬರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗಿದ್ದು, ಅರ್ಹರೆಲ್ಲರೂ ತಪ್ಪದೇ ಕೋವಿಡ್ ಲಸಿಕೆ ಪಡೆಯಬೇಕು ಎಂದು ಸಲಹೆ ನೀಡಿದರು.
ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯ ಸೇರಿದಂತೆ ಮೊಳಕಾಲ್ಮೂರು ಕ್ಷೇತ್ರ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಧುಕುಮಾರ್ ಮಾತನಾಡಿ, ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ರೋಗಿಗಳಿಗೆ ಉಚಿತವಾಗಿ ಸಲಹೆ, ತಪಾಸಣೆ, ಚಿಕಿತ್ಸೆ, ಲ್ಯಾಬ್ ಟೆಸ್ಟಿಂಗ್, ಇಸಿಜಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ ಎಲ್ಲ ಕಾರ್ಯಕ್ರಮಗಳ ಜಾಗೃತಿ ಶಿಬಿರ ಆಯೋಜಿಸಲಾಗಿದೆ. ಎಲ್ಲೆಡೆ ಆರೋಗ್ಯ, ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯವಾಕ್ಯದಡಿ ಆರೋಗ್ಯ ಮೇಳ ಆಯೋಜಿಸಲಾಗಿದ್ದು, ಆರೋಗ್ಯ ಮೇಳದ ಯಶಸ್ವಿಗೆ ಎಲ್ಲರೂ ಅಗತ್ಯ ಸಹಕಾರ ನೀಡಿದ್ದಾರೆ ಎಂದರು.
ತಹಶೀಲ್ದಾರ್ ಸುರೇಶಕುಮಾರ್ ಮಾತನಾಡಿ, ಮೊಳಕಾಲ್ಮುರು ತಾಲ್ಲೂಕಿನ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದರ ಮೂಲಕ ಎಲ್ಲರೂ ರೋಗ ಮುಕ್ತವಾಗಬೇಕು. ಆರೋಗ್ಯ ಮೇಳದ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳಿಗೆ ಸಚಿವರು ಕಾರ್ಡ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ತಾ.ಪಂ. ಇಒ ಜಾನಕಿರಾಂ, ರಾಂಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಭಿನವ್, ಗ್ರಾ.ಪಂ. ಅಧ್ಯಕ್ಷ ಪರಮೇಶ್ವರಪ್ಪ, ಜಿಲ್ಲಾ ಎಬಿಆರ್‌ಕೆ ಕೋಆರ್ಡಿನೇಟರ್ ಡಾ.ಚಂದ್ರಶೇಖರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುಮೂರ್ತಿ, ಮುಖಂಡರಾದ ಮಂಜುನಾಥ್, ನರೇಂದ್ರಬಾಬು, ಗೋವಿಂದಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss