Thursday, June 1, 2023

Latest Posts

ಪೆರಡಾಲದಲ್ಲಿ ವಸಂತ ವೇದ ಶಿಬಿರಕ್ಕೆ ಚಾಲನೆ

ಹೊಸದಿಗಂತ ವರದಿ,ಬದಿಯಡ್ಕ:

ಗುರುಮುಖೇನ ಪಿತೃವಿನ ಮೂಲಕ ಉಪದೇಶಿಸಲ್ಪಟ್ಟ ಗಿಡವನ್ನು ಪೋಷಿಸಿ ಬೆಳೆಸುವುದಕ್ಕಾಗಿ ವೇದಾಧ್ಯಯನ ಅತೀ ಅಗತ್ಯ. ಉಪನೀತನಾದ ವಟುವು ಸಂಸ್ಕಾರವಂತನಾಗಿ ಬಾಳಲು ಅವರನ್ನು ವೇದಾಧ್ಯಯನಕ್ಕೆ ಕಳುಹಿಸುವುದು ಬಹುಮುಖ್ಯವಾಗಿದೆ ಎಂದು ವೇದಮೂರ್ತಿ ಕೃಷ್ಣಕುಮಾರ ಭಟ್ ಕೋಡಿ ಹೇಳಿದರು.

ಶುಕ್ರವಾರ ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾ ಪೆರಡಾಲ ಇದರ ವತಿಯಿಂದ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ನಡೆದು ಬರುತ್ತಿರುವ ವಸಂತ ವೇದ ಪಾಠ ಶಿಬಿರವನ್ನು ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿನಿತ್ಯ ಸಂಧ್ಯಾವಂದನೆಯನ್ನು ಮಾಡುವುದು ನಮ್ಮ ಜೀವನಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದಂತೆ. ತಲೆಮಾರಿನಿಂದ ಬಂದಂತಹ ಸಂಸ್ಕಾರವು ನಿರಂತರ ಮುಂದುವರಿಯಬೇಕು ಎಂದರು.

ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಅಧ್ಯಕ್ಷ ಶಂಕರನಾರಾಯಣ ಭಟ್ ಕುಳಮರ್ವ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವೇದಮೂರ್ತಿ ರಾಜಗೋಪಾಲ ಭಟ್ ಬೆಳೇರಿ ಮಾತನಾಡಿ ಹಿರಿಯರಿಂದ ಉಪದೇಶಿಸಲ್ಪಟ್ಟ ವೇದವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮಮೇಲಿದೆ. ಮಕ್ಕಳು ವೇದಾಧ್ಯಯನವನ್ನು ಮಾಡುವುದರಿಂದ ನಾಳಿನ ಉತ್ತಮ ಪ್ರಜೆಗಳಾಗಿ ಮೂಡಿಬರಲು ಸಾಧ್ಯವಿದೆ ಎಂದರು.

ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರು, ಮುಳ್ಳೇರಿಯ ಹವ್ಯಕ ಮಂಡಲದ ಗುರಿಕ್ಕಾರ ನಿವೃತ್ತ ಅಧ್ಯಾಪಕ ಪೆರ್ಮುಖ ಈಶ್ವರ ಭಟ್, ಕಾಸರಗೋಡು ಹೊಸದುರ್ಗ ಹೈವ ಬ್ರಾಹ್ಮಣ ಸಭಾದ ಕೋಶಾಧಿಕಾರಿ ಗೋವಿಂದ ಭಟ್ ಏತಡ್ಕ, ಕಾರ್ಯದರ್ಶಿ ಶ್ಯಾಮಪ್ರಸಾದ ಕಬೆಕ್ಕೋಡು ಶುಭಕೋರಿದರು. ವೇದಮೂರ್ತಿ ಕಿಳಿಂಗಾರು ಶಿವರಾಮ ಭಟ್ ಪೆರಡಾಲ ಸ್ವಾಗತಿಸಿ, ಸಂಸ್ಕೃತ ಅಧ್ಯಾಪಕ ಗೋವಿಂದ ಭಟ್ ಎಡನೀರು ವಂದಿಸಿದರು. ವೇದಶಿಬಿರದ ಗುರುಗಳಾದ ಮಹಾಗಣಪತಿ ಅಳಕ್ಕೆ, ಮುರಳೀಕೃಷ್ಣ ಅಳಕ್ಕೆ, ಕಿಳಿಂಗಾರು ಸುಬ್ರಹ್ಮಣ್ಯ ಭಟ್ ನೀರ್ಚಾಲು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!