ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರು ಚಾಲಕನೋರ್ವ ಮೂರು ನಾಯಿಮರಿಗಳನ್ನು ಕಾರಿನ ರೂಫ್ ಮೇಲೆ ಕೂರಿಸಿ ಹೋಗುತ್ತಿದ್ದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದ್ದು, ವಿಡಿಯೋ ವೈರಲ್ ಆಗುತ್ತಲೇ ಕಾರು ಚಾಲಕನಿಗೆ ಬೆಂಗಳೂರು ಪೊಲೀಸರು ತಕ್ಕಶಾಸ್ತಿ ಮಾಡಿದ್ದಾರೆ.
ಯಾವುದೇ ಸೇಫ್ಟಿ ಕ್ರಮವಿಲ್ಲದೇ ನಾಯಿಗಳನ್ನು ಕಾರಿನ ಟಾಪ್ ಮೇಲೆ ಕೂರಿಸಿ ಕಾರಿನೊಳಗೆ ಜೋರಾಗಿ ಮ್ಯೂಸಿಕ್ ಹಾಕಿಕೊಂಡು ಚಾಲಕ ಕಾರು ಚಲಾಯಿಸಿದ್ದಾನೆ. ಇದನ್ನು ಪ್ರಶ್ನಿಸಿದವರನ್ನೇ ಬಾಯಿಗೆ ಬಂದಂತೆ ನಿಂದಿಸಿದ್ದಾನೆ. ಆರೋಪಿ ಚಾಲಕ ಯಾವುದೇ ಸುರಕ್ಷತೆ ಇಲ್ಲದೆ ನಾಯಿಗಳನ್ನು ಟಾಪ್ ಮೇಲೆ ಕೂರಿಸಿದ್ದ ವಾಹನದಟ್ಟಣೆಯ ರಸ್ತೆಯಲ್ಲಿ ಕಾರು ಚಾಲನೆ ಮಾಡಿದ್ದ. ಮೂರು ನಾಯಿಗಳನ್ನು ಕೂರಿಸಿಕೊಂಡು ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ್ದನ್ನು ಕೇಳಲು ಹೋದವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಆರೋಪಿ ಚಾಲಕನನ್ನು 36 ವರ್ಷದ ಹರೀಶ್ ಎಂದು ಗುರುತಿಸಲಾಗಿದ್ದು, ಕಲ್ಯಾಣ ನಗರ ಸಮೀಪ ಈ ರೀತಿ ನಾಯಿಗಳನ್ನು ಕೂರಿಸಿಕೊಂಡು ಅಡ್ಡಾದಿಡ್ಡಿಯಾಗಿ ಕಾರ್ ಚಾಲನೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ಹರೀಶ್ ತನ್ನ ಕಾರಿನ ಮೇಲೆ ‘ಹರಿ ಲೈಕ್ಸ್ ರಿಸ್ಕ್’ ಎಂಬ ಟ್ಯಾಗ್‌ಲೈನ್‌ನೊಂದಿಗೆ ನಕಲಿ ‘ಪ್ರೆಸ್’ ಸ್ಟಿಕ್ಕರ್ ಅನ್ನು ಹೊಂದಿದ್ದ. ಆದರೆ ಪೊಲೀಸರ ವಿಚಾರಣೆ ವೇಳೆ ತಾನು ಹೇರ್ ಸ್ಟೈಲಿಸ್ಟ್ ಎಂದು ಬಾಯಿ ಬಿಟ್ಟಿದ್ದಾರೆ. ಇನ್ನು ಪ್ರೆಸ್ ಸ್ಟಿಕ್ಕರ್ ಬಗ್ಗೆ ವಿಚಾರಿಸಿದಾಗ ತಾನು ಮೊದಲು ಪ್ರೆಸ್ ನಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಕಾರಿನ ಮೇಲೆ ಈ ಸ್ಟಿಕ್ಕರ್ ಹಾಕಿದ್ದೆ. ಬಳಿಕ ಆ ಕೆಲಸ ತೊರೆದು ಸಲೂನ್ ನಲ್ಲಿ ಹೇರ್ ಸ್ಟೈಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ಆದರೆ ಈಗ ನಿರುದ್ಯೋಗಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಆತ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೀಗೆ ಕಾರಿನ ಮೇಲೆ PRESS ಸ್ಟಿಕ್ಕರ್ ಹಾಕಿದ್ದ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇನ್ನು ತನ್ನ ಕೃತ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ತನ್ನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಿಂದ ತಲೆ ಬೋಳಿಸಿಕೊಂಡಿದ್ದ. ಆದರೆ ಆತನ ಕಾರು ನಂಬರ್ ಮೂಲಕ ಪೊಲೀಸರು ಆತನ ಮನೆ ಪತ್ತೆ ಮಾಡಿ ಬಂಧಿಸಿದ್ದಾರೆ.