ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಪಿಲಿಭಿತ್ ಹಾಗೂ ಚಿತ್ರಕೂಟ್ ಜಿಲ್ಲೆಯಲ್ಲಿ 2 ಭೀಕರ ರಸ್ತೆ ಅಪಘಾತಗಳು ಸಂಭವಿಸಿದೆ. ಈ ಅಪಘಾತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 12 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪಿಲಿಭಿತ್ ಜಿಲ್ಲೆಯಲ್ಲಿ 11 ಜನರಿರುವ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದವರನ್ನು ಉತ್ತರಾಖಂಡದ ಖತಿಮಾ ಮೂಲದವರು ಎಂದು ಗುರುತಿಸಲಾಗಿದೆ. ಮದುವೆಗೆಂದು ತೆರಳಿದ್ದವರು ಮರಳಿ ಮನೆಗೆ ಹೋಗುವಾಗ ಈ ಅವಘಡ ಸಂಭವಿಸಿದೆ. ಮಾರುತಿ ಕಾರಿನಲ್ಲಿ 11 ಮಂದಿ ಪ್ರಯಾಣಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆಯ ಬದಿಗಿದ್ದ ಮರಕ್ಕೆ ಡಿಕ್ಕಿಯಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಕುಮಾರ್ ಪಾಂಡೆ ಮಾತನಾಡಿ, ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಮಾರ್ಗ ಮಧ್ಯೆ ಮೂವರು ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ದಾಖಲಾದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.
ಇನ್ನು ಚಿತ್ರಕೂಟ್ ಜಿಲ್ಲೆಯಲ್ಲಿ 11 ಜನರಿರುವ ಬುಲೆರೋ, ಟಕ್ರ‍್ಗೆ ಮುಖಾಮುಖಿ ಡಿಕ್ಕಿಯಾಗಿದ್ದು, ಐವರು ಸಾವನ್ನಪ್ಪಿದ್ದಾರೆ.
ರಾಯಪುರ ಪೊಲೀಸ್ ಠಾಣೆಯ ಬಳಿ ಬೆಳಗ್ಗೆ 5:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಪ್ರಯಾಗ್ರಾಜ್‌ನಿಂದ ಬರುತ್ತಿದ್ದ ಬುಲೆರೋ ಹಾಗೂ ರಾಯಪುರದಿಂದ ಬರುತ್ತಿದ್ದ ಟ್ರಕ್ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲಿಯೇ ಐದು ಜನ ಸಾವನ್ನಪ್ಪಿದ್ದು, ಇನ್ನುಳಿದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ನಿದ್ದೆಯ ಮಂಪರಿನಲ್ಲಿ ಕಾರು ಚಲಾಯಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ.