October 10, 2026
Saturday, October 10, 2026
spot_img

ಇಸ್ರೋ ಆವರಣದಲ್ಲಿ ಡ್ರೋನ್‌ ಹಾರಾಟ: ವ್ಯಕ್ತಿ ವಿರುದ್ಧ ಎಫ್‌ಐಆರ್‌ ದಾಖಲು


ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಆವರಣದ ನಿಷೇಧಿತ ವಲಯದಲ್ಲಿ ಎರಡು ಡ್ರೋನ್‌ಗಳು ಹಾರಾಟ ನಡೆಸಿದ ಹಿನ್ನೆಲೆಯಲ್ಲಿ ಎಚ್‌ಎಎಲ್ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಶನಿವಾರ ಬೆಳಗ್ಗೆ ಸುಮಾರು 8-16 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸುಮಾರು 80 ರಿಂದ 100 ಅಡಿ ಎತ್ತರದಲ್ಲಿ ಡ್ರೋನ್ ಇಸ್ರೋ ಆವರಣದಲ್ಲಿ 10 ರಿಂದ 12 ಸೆಕೆಂಡುಗಳ ಕಾಲ ಹಾರಾಟ ನಡೆಸುತ್ತಿರುವುದು ಕಂಡುಬಂದಿದೆ ಎಂದು ಇಸ್ರೋ ಆವರಣದ ಭದ್ರತಾ ಅಧಿಕಾರಿ ಸತೀಶ್ ಕುಮಾರ್ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಸ್ರೋ ಆವರಣವು ಅತ್ಯಂತ ಸೂಕ್ಷ್ಮ ಮತ್ತು ನಿರ್ಬಂಧಿತ ಪ್ರದೇಶವಾಗಿದ್ದು, ಇದನ್ನು ‘ನೋ ಡ್ರೋನ್ ಝೋನ್’ ಎಂದು ಘೋಷಿಸಲಾಗಿದೆ. ಪೂರ್ವಾನುಮತಿ ಇಲ್ಲದೆ ಇಂತಹ ಪ್ರದೇಶಗಳಲ್ಲಿ ಯಾವುದೇ ವೈಮಾನಿಕ ಚಟುವಟಿಕೆ ನಡೆಸುವುದು ಸುರಕ್ಷಿತವಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಬಂಧಗಳಿದ್ದರೂ, ಅಪರಿಚಿತ ವ್ಯಕ್ತಿಗಳು ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಚಾಲನೆ ಮಾಡಿದ್ದಾರೆ. ಹತ್ತಿರದಲ್ಲಿ ನಡೆದ ಯಾವುದೋ ಕಾರ್ಯಕ್ರಮಕ್ಕಾಗಿ ಸ್ಥಳೀಯರು ಈ ಡ್ರೋನ್‌ಗಳನ್ನು ಬಳಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯ ಈ ಘಟನಾ ಸಂಬಂಧ ಪೊಲೀಸರು ಕಾರ್ಯಕ್ರಮದ ಆಯೋಜಕರನ್ನು ವಿಚಾರಣೆ ನಡೆಸುತ್ತಿದ್ದಾರೆ.

Must Read