ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ರಾಜ್ಯದ ಸಚಿವ ಡಿ.ಸುಧಾಕರ್ ಅವರ ಮೇಲೆ ದಲಿತ ನಿಂದನೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಫ್‍ಐಆರ್ ದಾಖಲಾದ ತಕ್ಷಣ ಅವರನ್ನು ಬಂಧಿಸಬೇಕಿತ್ತು ಮತ್ತು ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು. ಜಾತಿ ನಿಂದನೆ ಮಾಡಿದ ಚಿತ್ರನಟ ಉಪೇಂದ್ರ ಅವರ ಮೇಲೆ ಎಫ್‍ಐಆರ್ ದಾಖಲಾಗಿತ್ತು. ಅವರ ವಿರುದ್ಧ ತೀಕ್ಷ್ಣ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಸಚಿವ ಮಲ್ಲಿಕಾರ್ಜುನ್ ಅವರು ಹಳ್ಳಿಗಳನ್ನು ಹೊಲಗೇರಿ ಮಾಡಬೇಡಿ ಎಂದಿದ್ದರು. ಆ ವಿಡಿಯೋ ಓಡಾಡುತ್ತಿದ್ದರೂ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಮೊನ್ನೆ ಮುಖ್ಯಮಂತ್ರಿಗಳ ಸಭೆ ನಡೆದಿತ್ತು. ಅಟ್ರಾಸಿಟಿ ಕಾಯಿದೆಯಡಿ ಕೇಸು ಬಂದಾಗ ತಕ್ಷಣ ಕ್ರಮಕ್ಕೆ ಸಿಎಂ ಸೂಚಿಸಿದ್ದರು. ಇನ್‍ಸ್ಪೆಕ್ಟರ್ ಒಬ್ಬರು ಸಂಸದ ಡಿ.ಕೆ.ಸುರೇಶ್ ಅವರನ್ನು ದಬಾಯಿಸಿ ಮಾತನಾಡಿದ್ದಕ್ಕೆ ಅವರನ್ನು ಅಮಾನತು ಮಾಡಲು ಒತ್ತಾಯಿಸÀಲಾಯಿತು. ನಿನ್ನೆ ಅವರನ್ನು ಅಮಾನತು ಮಾಡಿದ್ದಾರೆ ಎಂದರು.
ಡಿಸಿಪಿ ಸಂಬರಗಿ ಎಂಬವರು ದಲಿತರ ನಿಂದನೆ ಮಾಡುತ್ತಾರೆ. ಆದರೆ, ಇಲಾಖೆ, ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ದಲಿತರ ಹಕ್ಕು ರಕ್ಷಿಸುವುದಾಗಿ, ಅವರ ಪರ ಇರುವುದಾಗಿ ಸಿಎಂ ಹೇಳುತ್ತಾರೆ. ಇದೆಲ್ಲ ಗೋಸುಂಬೆ ರಾಜಕಾರಣ ಎಂದು ತಿಳಿಸಿದರು.
ಬಾಯಲ್ಲಿ ಹೇಳೋದೊಂದು, ಮಾಡೋದೊಂದು ಎಂಬಂತಾಗಿದೆ ಎಂದು ತಿಳಿಸಿದರಲ್ಲದೆ, ಇಬ್ಬಗೆಯ ನೀತಿ ಈ ಸರಕಾರದ್ದು. ಮುಖ್ಯಮಂತ್ರಿಗಳು ದಲಿತ ವಿರೋಧಿ ಎಂಬುದಕ್ಕೆ ಇವೇ ನಿದರ್ಶನ ಎಂದರು. ಸುಧಾಕರ್, ಮಲ್ಲಿಕಾರ್ಜುನ್ ಅವರನ್ನು ಮಂತ್ರಿಮಂಡಲದಿಂದ ಕಿತ್ತೆಸೆಯಬೇಕಿತ್ತು. ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡಬೇಕಿತ್ತು ಎಂದು ಆಗ್ರಹಿಸಿದರು.
ಇಬ್ಬರನ್ನು ಸಚಿವಸಂಪುಟದಿಂದ ಕೈಬಿಡದಿದ್ದರೆ ಇಡೀ ರಾಜ್ಯದಲ್ಲಿ ದಲಿತರು ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಎಸ್‍ಸಿ, ಎಸ್‍ಟಿ ಮೀಸಲು ನಿಧಿಯಿಂದ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬೇರೆಡೆಗೆ ವರ್ಗಾಯಿಸಿದ್ದು ಆಕ್ಷೇಪಾರ್ಹ. ಇದು ದಲಿತರಿಗೆ ಮಾಡಿದ ದ್ರೋಹ ಎಂದು ತಿಳಿಸಿದರು.