ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು: ಸಿದ್ದರಾಮಯ್ಯನವರ ನೇತೃತ್ವದ ಸರಕಾರವು ಎಸ್‍ಸಿ, ಎಸ್‍ಟಿ ಅನುದಾನದಲ್ಲಿ 11,144 ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಆರೋಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದರ ವಿರುದ್ಧ ಇಡೀ ರಾಜ್ಯದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಜನಾಂದೋಲನ ರೂಪಿಸಲಿದ್ದೇವೆ ಎಂದು ತಿಳಿಸಿದರು. ಸೆ. 25ರಿಂದ ಅಕ್ಟೋಬರ್ 10ರವರೆಗೆ ಜನಾಂದೋಲನ ನಡೆಯಲಿದೆ ಎಂದು ವಿವರಿಸಿದರು.
ಈ ಅನುದಾನವನ್ನು ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಬಳಸದೆ ಹೋದರೆ ಎರಡನೇ ಹಂತದಲ್ಲಿ ಜಿಲ್ಲಾ ಸಚಿವರು ಮತ್ತು ಶಾಸಕರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮವನ್ನು ಅಕ್ಟೋಬರ್ 11ರಿಂದ ಅಕ್ಟೋಬರ್ 25ರವರೆಗೆ ಎಲ್ಲ ಜಿಲ್ಲೆಗಳಲ್ಲಿ ಹಮ್ಮಿಕೊಳ್ಳಲಾಗುವುದು. ಎಲ್ಲ 224 ಶಾಸಕರ ಮನೆ ಎದುರು, ಜಿಲ್ಲಾ ಸಚಿವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮೂರನೇ ಹಂತದಲ್ಲಿ ಹರಿಹರದ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿಯಿಂದ ನವೆಂಬರ್ 2ನೇ ವಾರ ಪಾದಯಾತ್ರೆ ಮಾಡಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ. ಇದರ ನಿಮಿತ್ತ ಪಕ್ಷದ ಸಂಸದರು, ಶಾಸಕರು, ಮಾಜಿ ಶಾಸಕರು, ಪದಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಸಕ್ರಿಯವಾಗಿ ಆಯಾ ತಾಲ್ಲೂಕುಗಳಲ್ಲಿ, ಜಿಲ್ಲೆಗಳಲ್ಲಿ ಭಾಗವಹಿಸಲು ಕರೆ ನೀಡಿದರು.