ಹೊಸದಿಗಂತ ವರದಿ, ತುಮಕೂರು:
ನಗರದಲ್ಲಿ ಮಾದಕ ವಸ್ತುಗಳನ್ನಾಗಿ ಟೈಡಾಲ್ ಮಾತ್ರೆಗಳನ್ನು ಆಕ್ರಮವಾಗಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ಹೊಸ ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ(43), ಭಾನು ಪ್ರಕಾಶ್(23) ಅಭಿಷೇಕ(23),ಮೊಹಮ್ಮದ್ ಸೈಪ್(24), ಸೈಯದ್ ಲುಕ್ಮಾನ್(23), ಅಫ್ತಬ್(24), ಗುರುರಾಜ್(28) ಬಂಧಿತ ಆರೋಪಿಗಳು.
ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 10,500 ರೂ ಬೆಲೆಯ 300 ಮಾತ್ರೆಗಳನ್ನು ಮತ್ತು ಸೀರಂಜ್‌ಗಳನ್ನು, ಮೊಬೈಲ್ ಮತ್ತು ಬೈಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅತಿ ಚಿಕ್ಕ ವಯಸ್ಸಿನ ಮಕ್ಕಳು ಮತ್ತು ವಿದ್ಯಾರ್ಥಿಗಳ ಶರೀರದ ಮೇಲೆ ಹಾಗು ಮೆದುಳಿನ ಮೇಲೆ ಪರಿಣಾಮ ಬೀರುವ ವಿಷದ ಮಾತ್ರೆಗಳನ್ನು ಮಾರಾಟ ಮಾಡಿ, ಕೆಟ್ಟ ವಾತವರಣವನ್ನುಂಟು ಮಾಡಿರುವ ಬಂಧಿತರ ವಿರುದ್ಧ 13/2025 ಕಲಂ 123, 278, 280 ರೆ.ವಿ. 3(5) ಬಿ.ಎನ್.ಎಸ್. ಆಕ್ಟ್
ಅಡಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಜೈಲಿಗೆ ಅಟ್ಟಲಾಗಿದೆ.
ಏನಿದು ಪ್ರಕರಣ?
ಹೊಸಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯ ಎಸ್.ಐ.ಟಿ. ಬಡಾವಣೆ, ರೈಲ್ವೆ ಹಳಿಗಳ ಪಕ್ಕ ಹಾಗೂ ಉಪ್ಪಾರಹಳ್ಳಿ ಬ್ರಿಡ್ಜ್ ಶ್ರೀದೇವಿ ಕಾಲೇಜುಗಳ ಬಳಿ, ಕೆಲ ಹುಡುಗರು ಮೆಡಿಕಲ್ ಶಾಪ್’ಗಳಲ್ಲಿ ಹೋಗಿ ಸದರಿ ಟೈಡಾಲ್ ಮಾತ್ರೆಗಳನ್ನು ಕೊಡುವಂತೆ ಕೇಳುತ್ತಿದ್ದರು. ಇದರಿಂದ ಪ್ರೇರೇಪಿತರಾದ ತುಮಕೂರು ನಗರದ ಮಧುಗಿರಿ ರಸ್ತೆಯಲ್ಲಿರುವ ಮೆಡ್ ಪ್ಲಸ್ ಮೆಡಿಕಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಭಾನು ಪ್ರಕಾಶ್ ಎಂಬಾತ ಮೆಡಿಕಲ್’ಗಳಿಗೆ ಬರುವ ಮೆಡಿಕಲ್ ರೆಪ್ರೆಸೆಂಟೇಟಿವ್’ಗಳಿಗೆ ಟೈಡಾಲ್ ಮಾತ್ರೆಗಳನ್ನು ತಂದುಕೊಡುವಂತೆ ತಿಳಿಸಿದ್ದಾನೆ.
ಅದರಲ್ಲಿ ಬೆಂಗಳೂರಿನಲ್ಲಿ ವಾಸವಾಗಿರುವ ಮೆಡಿಕಲ್ ರೆಪ್ ರಾಘವೇಂದ್ರ, ಎಂಬಾತ ಸದರಿ ಮಾತ್ರೆಗಳನ್ನು ಯಾವುದೇ ಬಿಲ್’ಗಳಿಲ್ಲದೆ ಆಕ್ರಮವಾಗಿ ಮೊದಲು 345 ರೂ. ಗೆ ಒಂದು ಶೀಟ್’ನಂತೆ 4 ಶೀಟ್’ಗಳನ್ನು ತಂದು ತಂದುಕೊಟ್ಟಿದ್ದಾನೆ. ಇದೇ ವೇಳೆ ಮಾತ್ರೆಗಳಿಗೆ ಬೇಡಿಕೆ ಜಾಸ್ತಿಯಾಗಿದೆ.
ಈ ಕಾರಣ ಭಾನು ಪ್ರಕಾಶ್ ಮತ್ತು ರಾಘವೇಂದ್ರ ಸೇರಿಕೊಂಡು ಸದರಿ ಮಾತ್ರೆಗಳನ್ನು ಅಂಗಡಿಯಲ್ಲಿ ಮಾರಾಟ ಮಾಡದೇ ಸದರಿ ಮಾತ್ರೆಗಳನ್ನು ಕೇಳಿಕೊಂಡು ಬರುವ ಗಿರಾಕಿಗಳಿಗೆ ತಮ್ಮ ಮೊಬೈಲ್ ನಂಬರ್ ನೀಡಿ, ಶ್ರೀದೇವಿ ಕಾಲೇಜ್ ಬಳಿ, ಇಂಡಸ್ಟ್ರೀಯಲ್ ಏರಿಯಾಗಳಿಗೆ ಕರೆಸಿಕೊಂಡು ಆಕ್ರಮ ಲಾಭ ಗಳಿಸುವ ಉದ್ದೇಶದಿಂದ 10 ಮಾತ್ರೆಗಳಿರುವ ಒಂದು ಶೀಟ್ ಅನ್ನು 800 ರೂ.ಗಳಿಗೆ ಮಾರಾಟ ಮಾಡಲು ಆರಂಭಿಸಿದ್ದಾರೆ. ಇದಲ್ಲದೇ ಈ ಹಿಂದೆ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್ ಎಂಬುವನಿಗೆ ಮೊಬೈಲ್ ಕೊಡಿಸಿ, ಸದರಿ ನಂಬರ್’ಗೆ ಟೈಡಾಲ್ ಮಾತ್ರೆಗಳನ್ನು ಕೇಳಿಕೊಂಡು ಪೋನ್ ಮಾಡುವವದನ್ನು ಕರೆಸಿ 800 ರೂ.ಗೆ 10 ಮಾತ್ರೆಗಳಿರುವ ಶೀಟನ್ನು ಮತ್ತು ಸಿ ಅನ್ನು ಮಾರಾಟ ಮಾಡು ಎಂದು ತಿಳಿಸಿದ್ದಾರೆ.
ಅದರಂತೆ ಅಭಿಷೇಕ್, ಸದರಿ ಮಾತ್ರೆ ಮತ್ತು ಸಿರಂಜ್’ಗಳನ್ನು ಒಂದು ಬ್ಯಾಗ್’ನಲ್ಲಿ ಇಟ್ಟುಕೊಂಡು ಭಾನುಪ್ರಕಾಶ್ ತಂದು ಕೊಡುತ್ತಿದ್ದ ಮಾತ್ರೆಗಳನ್ನು ಪೋನ್ ಮಾಡುತ್ತಿದ್ದ ಮೊಹಮ್ಮದ್ ಸೈಫ್, ಸೈಯದ್ ಲುಕ್ಕಾನ್, ಅಪ್ಲಬ್, ಗುರುರಾಜ್ ಎಂಬುವರಿಗೆ ಮತ್ತು ಇತರರಿಗೆ ಶಿರಾಗೇಟ್ ಬಳಿ ಮತ್ತು ಇಂಡಸ್ಟ್ರಿಯಲ್ ಏರಿಯಾ ಬಳಿ ಕರೆಸಿಕೊಂಡು ಮಾರಾಟ ಮಾಡುತ್ತಿದ್ದನು.
800 ರೂ.ಗಳಿಗೆ ತೆಗೆದುಕೊಂಡು ಹೋದ 10 ಮಾತ್ರೆಗಳಿರುವ ಶೀಟ್‌ನ್ನು ಮೇಲ್ಕಂಡ ಆರೋಪಿತರುಗಳು ಒಂದೊಂದು ಮಾತ್ರೆಗಳನ್ನು ಕವರ್ ಸಮೇತ ಕಟ್ ಮಾಡಿ ಒಂದು ಮಾತ್ರೆಗೆ 100 ರೂ. ರೂ.ಗಳಿಂದ 200 ರೂ.ಗಳ ವರೆಗೆ ಮಾರಾಟ ಮಾಡಿ ಆಕ್ರಮ ಲಾಭ ಗಳಿಸುತ್ತಿದ್ದರು. ಅವರು ಸಹ ಆಗಾಗ ಆ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು. ಸದರಿ ಮಾತ್ರೆಗಳ ನೀರು ಶರೀರಕ್ಕೆ ಹೋಗುತ್ತಿದ್ದಂತೆ, ಕಿಕ್ ಹೊಡೆಯುತ್ತದೆ ಮತ್ತು ನಶೆ ಬರುತ್ತದೆಂದಂದು ಈ ಮಾತ್ರೆಗಳನ್ನು ಉಪಯೋಗಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.