ಹೊಸದಿಗಂತ ವರದಿ, ಮಂಗಳೂರು:
ಹಿಂದೂ ದೇಗುಲಗಳ ರಕ್ಷಣೆಗೆ ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳ ಸಂಪತ್ತಿನಿಂದ ಊರಿಗೆ ಶಿಕ್ಷಣ ಆಗಬೇಕು ಎಂದು ಉಡುಪಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಇಂದು ಅನೇಕ ದೇವಾಲಯಗಳು ಸರಕಾರದ ಕಪಿಮುಷ್ಠಿಯಲ್ಲಿದೆ, ಅವುಗಳ ಜೀರ್ಣೋದ್ಧಾರ ಆಗುತ್ತಿಲ್ಲ, ಪರಿಚಾರಕ ವರ್ಗಕ್ಕೆ ಸೂಕ್ತ ಸಂಭಾವನೆ ಸಿಗುತ್ತಿಲ್ಲ, ಭಕ್ತರು ನೀಡುವ ಕಾಣಿಕೆ ಸಧ್ವಿನಿಯೋಗ ಆಗುತ್ತಿಲ್ಲ ಎಂದು ಹೇಳಿದರು.
ಇನ್ನು ಕುಂಭಮೇಳದ ಕುರಿತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರ ಆಶಯಗಳು ತೆರೆದಿಟ್ಟಿವೆ. ಎಲ್ಲರ ಭಾವನೆಯನ್ನು ಗೌರವಿಸಬೇಕು ಯಾರನ್ನು ನೋಯಿಸಬಾರದು. ಅವರ ಹೇಳಿಕೆಗೆ ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದರು.
ಇನ್ನು ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಲ್ಲಿ ಹಲವರು ಸಾವನ್ನಪ್ಪಿದ್ದ ಕುರಿತು ಪ್ರತಿಕ್ರಯಿಸಿದ ಅವರು ಕುಂಭಮೇಳದಲ್ಲಿ ಕೆಲ ಅನಾನುಕೂಲತೆ ಆಗಿದೆ ಎಂಬುದರ ಕುರಿತು ಮಾಹಿತಿ ಇದೆ. ಯಾವುದೇ ಅನಾನುಕೂಲತೆಗಳು ಆಗದಂತೆ ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.