ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಆಟೋರಿಕ್ಷಾವನ್ನು ರೈಲ್ವೆ ಹಳಿ ಮೇಲೆ ನಿಲ್ಲಿಸಿದ್ದ ಪರಿಣಾಮ, ಕೇರಳದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಘಟನೆ ನಡೆದಿದೆ. ಆದರೆ ಲೋಕೋ ಪೈಲಟ್‌ನ ತಕ್ಷಣದ ಎಚ್ಚರಿಕೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ಚಲಿಸುತ್ತಿದ್ದ ವಂದೇ ಭಾರತ್ ರೈಲು, ವರ್ಕಲಾ–ಕಡಕ್ಕಾವೂರು ವಿಭಾಗದ ಅಕತುಮುರಿ ನಿಲ್ದಾಣದ ಸಮೀಪ ರಾತ್ರಿ ಸುಮಾರು 10.10ರ ವೇಳೆಗೆ ಈ ಘಟನೆಗೆ ನಡೆದಿದೆ. ಹಳಿಯ ಮೇಲೆ ಆಟೋರಿಕ್ಷಾ ನಿಂತಿರುವುದನ್ನು ಗಮನಿಸಿದ ಲೋಕೋ ಪೈಲಟ್ ತಕ್ಷಣ ಬ್ರೇಕ್ ಹಾಕಿದರು. ಆದರೂ ರೈಲಿನ ಮುಂಭಾಗ ಆಟೋಗೆ ಡಿಕ್ಕಿ ಹೊಡೆದಿದೆ. ಒಂದು ವೇಳೆ ಬ್ರೇಕ್ ಹಾಕಲು ತಡವಾಗಿದ್ದರೆ ಬೋಗಿಗಳು ಹಳಿತಪ್ಪುತ್ತಿದ್ದವು.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ರೈಲ್ವೆ ರಕ್ಷಣಾ ಪಡೆ, ಇಂಜಿನಿಯರಿಂಗ್ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಪರಿಶೀಲನೆಯ ವೇಳೆ ಆಟೋರಿಕ್ಷಾದೊಳಗೆ ಯಾರೂ ಇರಲಿಲ್ಲ. ಚಾಲಕನ ನಿಯಂತ್ರಣ ತಪ್ಪಿ ಆಟೋ ಪ್ಲಾಟ್‌ಫಾರ್ಮ್‌ಗೆ ಡಿಕ್ಕಿ ಹೊಡೆದು ಬಳಿಕ ಹಳಿಗೆ ಉರುಳಿರಬಹುದು ಎಂದು ಶಂಕಿಸಲಾಗಿದೆ. ಬಳಿಕ ಆಟೋ ಚಾಲಕ ಸುಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆತ ಮದ್ಯದ ಅಮಲಿನಲ್ಲಿದ್ದನೆಂದು ಹೇಳಲಾಗಿದೆ. ಲೋಕೋ ಪೈಲಟ್‌ನ ಸಮಯೋಚಿತ ಕ್ರಮವೇ ಭಾರೀ ಅಪಘಾತ ತಪ್ಪಲು ಕಾರಣವಾಯಿತು ಎಂದು ರೈಲ್ವೆ ಇಲಾಖೆ ತಿಳಿಸಿದೆ.

