Monday, October 2, 2023

Latest Posts

ಡಿಸಿ-ಸಿಇಒಗಳೊಂದಿಗೆ ನಡೆದ ಸಭೆಯಲ್ಲಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳೊಂದಿಗೆ ಕೋವಿಡ್-19 ಲಸಿಕಾ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.

ಆರೋಗ್ಯ ಸಚಿವ ಡಾ. ಕೆ.ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯ ಮುಖ್ಯಾಂಶಗಳು

* ಮೊದಲನೇ ಹಾಗೂ 2ನೇ ಡೋಸ್ ಲಸಿಕೆ ಪ್ರಮಾಣದಲ್ಲಿ ರಾಜ್ಯ ಸರಾಸರಿಗಿಂತ ಕಡಿಮೆ ಇರುವ ಜಿಲ್ಲೆಗಳು ತಿಂಗಳ ಅಂತ್ಯದೊಳಗೆ ರಾಜ್ಯ ಸರಾಸರಿಯನ್ನು ತಲುಪಬೇಕು ಎಂದು‌ ಎಲ್ಲ‌ ಜಿಲ್ಲೆಗಳ ಡಿಸಿಗಳಿಗೆ ಸೂಚಿಸಲಾಯಿತು.

* ಜಿಲ್ಲಾಡಳಿತಗಳು ದಕ್ಷತೆಯಿಂದ ಗ್ರಾಮದ ಪ್ರತೀ ಮನೆಗೂ ಔಷಧ ಕಿಟ್ ಗಳನ್ನು ತಲುಪಿಸಬೇಕು. ಹೋಮ್ ಐಸೋಲೇಶನ್ ನಲ್ಲಿರುವವರಿಗೆ ಸರಿಯಾದ ಚಿಕಿತ್ಸೆಯನ್ನು ನೀಡುವಂತೆ ಸೂಚನೆ.

* ಜಿಲ್ಲಾಧಿಕಾರಿಗಳು, ಡಿ.ಎಚ್.ಒ.ಗಳು ತಾಲೂಕುಗಳಿಗೆ ಭೇಟಿ ನೀಡಿ ಔಷಧ ವಿತರಣೆಯ ಬಗ್ಗೆ ಪರಿಶೀಲಿಸಬೇಕು. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಮೇಲ್ವಿಚಾರಣೆ ಕೈಗೊಳ್ಳಲು ಸೂಚಿಸಲಾಯಿತು.

* ಪ್ರಯೋಗಾಲಯದ ವರದಿ ಬಂದ ತಕ್ಷಣ ಟೆಲಿ ಟ್ರಯಾಜಿಂಗ್ ಮಾಡಬೇಕು.

* ಶೇ. 94ರಷ್ಟು ಸೋಂಕಿತರು ಹೋಮ್ ಐಸೋಲೇಶನ್ ಇರುವುದರಿಂದ ಮನೆಯವರಿಗೆ ಹರಡದಂತೆ ಕ್ರಮ ಕೈಗೊಳ್ಳಬೇಕು. ಸೋಂಕಿತರ ಮನೆಯವರಿಗೂ ಪರೀಕ್ಷೆ ಮಾಡಿ ಅಗತ್ಯವಿದ್ದರೆ ಚಿಕಿತ್ಸೆ ನೀಡಲು ಸೂಚಿಸಲಾಯಿತು.

* ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಿ ವೈದ್ಯರು ಹಾಗೂ ಎ.ಎನ್.ಎಂ.ಗಳು ಮನೆ ಮನೆ ಭೇಟಿ ಮಾಡಬೇಕು. ಇದಕ್ಕೆ ವಿಶೇಷ ಎಸ್.ಒ.ಪಿ. ರೂಪಿಸಲು ನಿರ್ಧರಿಸಲಾಯಿತು.

* ಬೆಂಗಳೂರಿನಲ್ಲಿ ಖಾಸಗಿ ಹಾಗೂ ಸರಕಾರಿ ಒಪಿಡಿಗಳನ್ನು ಬಲಪಡಿಸಲು ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಹೊಸ ಒಪಿಡಿಗಳನ್ನು ತೆರೆಯಲು ಸೂಚಿಸಲಾಯಿತು.

* ಕೆಲಸಕ್ಕಾಗಿ ಹೊರ ರಾಜ್ಯಗಳಿಂದ ಕಾರ್ಮಿಕರನ್ನು ಕರೆತರುವ ರಾಜ್ಯದ ಕೈಗಾರಿಕೆಗಳಿಗೆ ಕಾರ್ಮಿಕರ ಲಸಿಕೆ ಹಾಗೂ ಚಿಕಿತ್ಸೆ ಕುರಿತು ವಿಶೇಷ ಎಸ್ಒಪಿ ರೂಪಿಸಲು ಸೂಚಿಸಲಾಯಿತು.

* ಎಲ್ಲ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ ಕೋ- ಮಾರ್ಬಿಡಿಟಿ ಇರುವವರನ್ನು ಗುರುತಿಸಿ, ಹೋಮ್ ಐಸೋಲೇಶನ್ ನಲ್ಲಿರುವವರಿಗೆ ಟೆಸ್ಟ್ ಮಾಡಿ ಚಿಕಿತ್ಸೆ ನೀಡುವಂತೆ ಸೂಚಿಸಲಾಯಿತು.

* ಕೋ- ಮಾರ್ಬಿಡಿಟಿ ಇರುವವರು ಹಾಗೂ 60 ವರ್ಷಗಳಿಗೂ ಮೇಲ್ಪಟ್ಟವರಿಗೆ ಪರೀಕ್ಷೆಗಳನ್ನು ಹೆಚ್ಚಿಸಬೇಕು ಮತ್ತು ಔಷಧಿ ಒದಗಿಸಬೇಕು.

* ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಗೆ ಹೆಚ್ಚು ಒತ್ತು ನೀಡಬೇಕು.

* ಮುಂಚೂಣಿ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಅಭಿಯಾನ ಕೈಗೊಳ್ಳಬೇಕು.

* ಲಸಿಕೆ ಪಡೆದು 90 ದಿನ ಪೂರೈಸಿರುವವರ ಪಟ್ಟಿ ತಯಾರಿಸಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಸಿಕೆ ಕಾರ್ಯಕ್ರಮದ ಮೇಲ್ವಿಚಾರಣೆಯ ಜವಾಬ್ದಾರಿ ನೀಡುವಂತೆ ಸೂಚಿಸಲಾಯಿತು.

ಕರ್ನಾಟಕದಲ್ಲಿ ಪರೀಕ್ಷೆಗಳು ಹೆಚ್ಚಾಗಿರುವುದರಿಂದ ಪ್ರಕರಣಗಳು ಹೆಚ್ಚಿದ್ದರೂ ಕೋವಿಡ್ ಪರಿಸ್ಥಿತಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮುನ್ನೆಚ್ಚರಿಕಾ ಕ್ರಮಗಳು ಉತ್ತಮವಾಗಿದ್ದರೆ ಕೋವಿಡ್ ಮೂರನೇ ಅಲೆ ಏರುಗತಿ ತಲುಪಿದರೂ ಆತಂಕ ಪಡದೆ ಯಶಸ್ವಿಯಾಗಿ ಮೂರನೇ ಅಲೆ ನಿಭಾಯಿಸಬಹುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!