ಹೊಸದಿಗಂತ ಡಿಜಿಟಲ್ ಡೆಸ್ಕ್
ಉಡುಪಿ: ಪರ್ಯಾಯ ಪೀಠವೇರಿ ಕಳೆದ 2 ವರ್ಷಗಳ ಕಾಲ ಉಡುಪಿ ಶ್ರೀಕೃಷ್ಣನ ಪೂಜಾ ಕೈಂಕರ್ಯದ ಜೊತೆ ಜೊತೆಗೆ ಸಮಾಜ ಜಾಗೃತಿ ಮತ್ತು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ಮಗ್ನರಾಗಿದ್ದ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರೀಯತೀರ್ಥರು, ಮಠದ ಪರಿಸರದಿಂದ ಹೊರಗೆ ಬರುತ್ತಿದ್ದಂತೆ ಉಪೇಕ್ಷಿತ ಬಂಧುಗಳ ಕಾಲೊನಿಗೆ ಭೇಟಿ ನೀಡಿದರು.
ಮಂಗಳವಾರ ಮುಂಜಾನೆಯ ಶ್ರೀಕೃಷ್ಣನ ಪೂಜೆಯ ಬಳಿಕ ಪರಂಪರೆಯಂತೆ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರಿಗೆ ಮುಂದಿನ ಎರಡು ವರ್ಷಗಳ ಪರ್ಯಾಯ ಪೂಜಾದಿ ಹೊಣೆಯನ್ನು ಹಸ್ತಾಂತರಿಸಿ, ಶ್ರೀಈಶಪ್ರಿಯತೀರ್ಥರು ಸಮಾಜದ ಪ್ರತ್ಯಕ್ಷ ಕಾರ್ಯಕ್ಕೆ ಧಾವಿಸಿರುವುದು ವಿಶೇಷ. ಮಧ್ಯಾಹ್ನ ಮಣಿಪಾಲದ ಸಮೀಪದ ನೇತಾಜಿ ನಗರದ ಉಪೇಕ್ಷಿತ ಕಾಲೋನಿಗೆ ಭೇಟಿ ನೀಡಿ ಸ್ಥಳೀಯರ ಯೋಗಕ್ಷೇಮ ವಿಚಾರಿಸಿದರು.
ಈ ವೇಳೆ ಶ್ರೀಕೃಷ್ಣನ ನಾಮ ಜಪದ ಬೋಧನೆ ಮತ್ತು ಧಾರ್ಮಿಕ ಪ್ರವಚನ ನೀಡಿದ ಅದಮಾರು ಶ್ರೀಗಳು, ದೇವರ ಬಗೆಗಿನ ಮೊದಲ ತಿಳುವಳಿಕೆಯೇ ಅವನು ಪೂರ್ಣ ತಿಳಿಯಲು ಸಾಧ್ಯವಾಗದವನು ಎಂಬುದು. ಸ್ವಲ್ಪ ಸ್ವಲ್ಪ ತಿಳಿಯುತ್ತಾ ದೇವರು ತಿಳಿಯುತ್ತಾ ಹೋಗುತ್ತಾನೆ. ಕೃಷ್ಣ ಎಂದರೆ ಕಷ್ಟದಿಂದ ಪರಿಶ್ರಮದಿಂದ ಲಭ್ಯವಾಗುವವನು, ಎಲ್ಲರಿಂದಲೂ ಆಕರ್ಷಿತನಾಗುವವನು. ನಮ್ಮ ಆರಾಧನೆಗಾಗಿ ನಾವೇ ರಚಿಸಿಕೊಂಡಿರುವ ರಚನೆ ದೇವರ ಮೂರ್ತಿ. ಈ ರೀತಿ ಆರಾಧನೆ, ಕೀರ್ತನೆ, ಕಥೆಗಳ ಮೂಲಕ ದೇವರನ್ನು ಹೆಚ್ಚು ಹೆಚ್ಚು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ದೇವರನ್ನು ತಿಳಿದುಕೊಳ್ಳುವ ಮೊದಲ ಮೆಟ್ಟಿಲು ದೇವರ ನಾಮ ಸ್ಮರಣೆ. ದೇವರ ಪೂಜೆಯಿಂದ ನಮ್ಮ ಕಷ್ಟ ಪರಿಹಾರ ಆಗುವುದಿಲ್ಲ. ಮುಂದೆ ಕಷ್ಟ ಬರದ ಹಾಗೆ ನಾವು ದೇವರ ಆರಾಧನೆ ಮಾಡಬೇಕು. ನಮ್ಮ ಒಳ್ಳೆಯ ಕೆಲಸ ಈ ಜನ್ಮದಲ್ಲಿ, ಮುಂದಿನ ಜನ್ಮದಲ್ಲೂ ಲಭಿಸುತ್ತದೆ. ಈ ರೀತಿ ನಿರಂತರ ಸಂಪರ್ಕದಲ್ಲಿದ್ದುಕೊಂಡು ಧಾರ್ಮಿಕ ಚಿಂತನೆ ಮುಂದುವರೆಸೋಣ. ಹಿಂದು ಧರ್ಮದ ಜಾಗೃತಿ ಇಂದಿನ ಅತೀ ಅವಶ್ಯ ಸಂಗತಿ ಎಂದು ಶ್ರೀಈಶಪ್ರಿಯತೀರ್ಥರು ಅಭಿಪ್ರಾಯ ಪಟ್ಟರು.
ಮೊದಲ ಭೇಟಿಯೇ ಉಪೇಕ್ಷಿತ ಮನೆಗೆ
ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಪೂಜಾ ದೀಕ್ಷೆ ತೊಟ್ಟ ಯತಿಗಳು ಕೃಷ್ಣಮಠದ ಪರಿಸರದಿಂದ ಹೊರ ಹೋಗುವಂತಿಲ್ಲ. ಈ ಅವಧಿಯಲ್ಲಿ ಕೃಷ್ಣ ಮಠದಲ್ಲಿ ಪೂಜಾ ಕಾರ್ಯದ ಜೊತೆಗೆ ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಾರೆ. ಇಲ್ಲಿ ಅದಮಾರು ಶ್ರೀಗಳು ಕೃಷ್ಣ ಮಠದ ಪರಿಸರದಿಂದ ಹೊರಗೆ ಬಂದು ಮೊದಲ ಭೇಟಿಯಾಗಿದ್ದು ಉಪೇಕ್ಷಿತ ಮನೆಗಳಿಗೆ. ಎಲ್ಲರ ಯೋಗ ಕ್ಷೇಮ ವಿಚಾರಿಸಿ, ನಂತರ ಎಲ್ಲರಿಗೂ ಶ್ರೀಕೃಷ್ಣನ ಪ್ರಸಾದ ನೀಡಿದರು. ಈ ಮೂಲಕ ಉಡುಪಿ ಶ್ರೀ ಕೃಷ್ಣ ಮಠದ ಸಾಮಾಜಿಕ ಸ್ಪಂದನದ 500 ವರ್ಷಗಳ ಸಂಪ್ರದಾಯಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಡಾ. ನಾರಾಯಣ ಶೆಣೈ, ಜಿಲ್ಲಾ ಸಾಮರಸ್ಯ ಪ್ರಮುಖ್ ರವಿ ಅಲೆವೂರು, ಧರ್ಮ ಜಾಗರಣ ಪ್ರಮುಖ್ ಅಶೋಕ ಪರ್ಕಳ, ಸೇವಾ ಪ್ರಮುಖ್ ಭಾಸ್ಕರ್ ಮಣಿಪಾಲ ಉಪಸ್ಥಿತರಿದ್ದರು.