September 27, 2026
Sunday, September 27, 2026
spot_img

ಭೂಕಂಪನಕ್ಕೆ ನಡುಗಿದ ಲಡಾಖ್: ಲೇಹ್‌ನಲ್ಲಿ 4.1 ತೀವ್ರತೆಯ ಕಂಪನ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಡಾಖ್ ಪ್ರಾಂತ್ಯದಲ್ಲಿ ಗುರುವಾರ ಮುಂಜಾನೆ ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಖಚಿತಪಡಿಸಿದೆ.

ಗುರುವಾರ ಮುಂಜಾನೆ ಸುಮಾರು 3:54 ಗಂಟೆಗೆ ಲಡಾಖ್‌ನ ಲೇಹ್ ಭಾಗದಲ್ಲಿ ಈ ಕಂಪನ ಅನುಭವಕ್ಕೆ ಬಂದಿದೆ. ಭೂಕಂಪದ ಕೇಂದ್ರಬಿಂದು ಲೇಹ್‌ನಿಂದ ಸುಮಾರು 150 ಕಿಲೋಮೀಟರ್ ಆಳದಲ್ಲಿ ಇತ್ತೆಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ. ಭೂಕಂಪದ ತೀವ್ರತೆ ಮಧ್ಯಮವಾಗಿದ್ದರೂ, ಗಾಢ ನಿದ್ರೆಯಲ್ಲಿದ್ದ ಜನರು ಭಯಭೀತರಾಗಿ ತಕ್ಷಣವೇ ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ.

ಅದೃಷ್ಟವಶಾತ್, ಈ ನೈಸರ್ಗಿಕ ವಿಕೋಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಸ್ವಲ್ಪ ಸಮಯದ ನಂತರ ಪರಿಸ್ಥಿತಿ ತಿಳಿಯಾಗಿದ್ದು, ಜನರು ತಮ್ಮ ದೈನಂದಿನ ಚಟುವಟಿಕೆಗಳಿಗೆ ಮರಳಿದ್ದಾರೆ.

ಲಡಾಖ್ ಮಾತ್ರವಲ್ಲದೆ, ಅತ್ತ ನೆರೆಯ ಅಫ್ಘಾನಿಸ್ತಾನದಲ್ಲೂ ಭೂಕಂಪನ ಉಂಟಾಗಿದೆ. ಅಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆ ದಾಖಲಾಗಿದ್ದು, ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಈ ಕುರಿತು ಮಾಹಿತಿ ಹಂಚಿಕೊಂಡಿದೆ. ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ಭೂಕಂಪಗಳು ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Must Read