ಹೊಸದಿಗಂತ ಡಿಜಿಟಲ್ ಡೆಸ್ಕ್
1971 ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ಭಾರತದ ವಿರುದ್ಧ ಅನುಭವಿಸಿದ ಹೀನಾಯ ಸೋಲು “ಬೃಹತ್ ಮಿಲಿಟರಿ ವೈಫಲ್ಯ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಕರೆದಿದ್ದಾರೆ.
ರಾವಲ್ಪಿಂಡಿಯಲ್ಲಿ ನ.26 ರಂದು ಸೇನೆಯನ್ನು ಉದ್ದೇಶಿಸಿ ಮಾತನಾಡಿದ್ದ ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಭಾರತದ ವಿರುದ್ಧ ಎದುರಾದ ಸೋಲನ್ನು “ರಾಜಕೀಯ ವೈಫಲ್ಯ” ಎಂದು ಬಣ್ಣಿಸಿದ್ದರು. ಬಾಜ್ವಾ ಹೇಳಿಕೆಗೆ ಬುಟ್ಟೋ ಇದೀಗ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಯ 55 ನೇ ಸಂಸ್ಥಾಪನಾ ದಿನದಂದು ಆಯೋಜಿಸಲಾದ ರ್ಯಾಲಿಯಲ್ಲಿ ಮಾತನಾಡಿದ ಬಿಲಾವಲ್ ಬುಟ್ಟೋ ಪಿಪಿಪಿ ಸ್ಥಾಪಕ – ತಮ್ಮ ಅಜ್ಜ ಜುಲ್ಫಿಕರ್ ಅಲಿ ಭುಟ್ಟೊ ಅವರ ಸಾಧನೆಗಳನ್ನು ವಿವರಿಸಿದರು.
“ಝುಲ್ಫಿಕರ್ ಅಲಿ ಭುಟ್ಟೊ ಅವರು ಪಾಕ್ ಪ್ರಾಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವಾಗ, ಜನರು ಸರ್ಕಾರದ ಕುರಿತಾಗಿ ಬೇಸತ್ತುಹೋಗಿದ್ದರು ಮತ್ತು ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದರು. ಭುಟ್ಟೋ ಅವರು ರಾಷ್ಟ್ರವನ್ನು ಪುನರ್ನಿರ್ಮಿಸಿದರು, ಜನರ ವಿಶ್ವಾಸವನ್ನು ಪುನಃಸ್ಥಾಪಿಸಿದರು. ಈಗ ಸೋಲಿನ ಹೊಣೆಯನ್ನು ಅವರ ತಲೆಮೇಲೆ ಕಟ್ಟುವುದು ಸರಿಯಲ್ಲ. ‘ಮಿಲಿಟರಿ ವೈಫಲ್ಯ’ದಿಂದಾಗಿ ನಮ್ಮ 90,000 ಸೈನಿಕರನ್ನು ಭಾರತ ಯುದ್ಧ ಕೈದಿಗಳನ್ನಾಗಿ ಸೆರೆಹಿಡಿದಿತ್ತು. ಆದರೆ ಭುಟ್ಟೋ ಅವರ ಪ್ರಯತ್ನದ ಫಲವಾಗಿ ಅವರೆಲ್ಲ ಮನೆಗೆ ಮರಳಿದರು. ಆ 90,000 ಸೈನಿಕರು ತಮ್ಮ ಕುಟುಂಬಗಳೊಂದಿಗೆ ಮತ್ತೆ ಸೇರಿಕೊಂಡರು. ರಾಜಕೀಯ ಇಚ್ಛಾಶಕ್ತಿ, ಏಕತೆ ಮತ್ತು ಒಳಗೊಳ್ಳುವಿಕೆಯ ರಾಜಕೀಯದಿಂದಾಗಿ ಎಲ್ಲವೂ ಸಾಧ್ಯವಾಯಿತು, ”ಎಂದು ಅವರು ಪ್ರತಿಪಾದಿಸಿದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ