ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನವ ದೇಹ ಅತ್ಯಂತ ಅಮೂಲ್ಯ ಸಂಪತ್ತು. ಎಷ್ಟೇ ಹಣ ಕೊಟ್ಟರೂ ದೇಹದ ಯಾವುದೇ ಅಂಗ ಮರಳಿ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ದೇಹವನ್ನು ದೇವರ ಕೊಡುಗೆ ಎಂದು ಭಾವಿಸಿ, ಅದಕ್ಕೆ ಹಾನಿಯಾಗುವ ಆಹಾರ, ಅಭ್ಯಾಸಗಳಿಂದ ದೂರವಿದ್ದು, ಹಿತವನ್ನು ತಿನ್ನಿ, ಮಿತವಾಗಿ ತಿನ್ನಿ ಮತ್ತು ಸಕಾಲದಲ್ಲಿ ತಿನ್ನಿ ಎಂಬ ಸೂತ್ರ ಜೀವನದಲ್ಲಿ ಅಳವಡಿಸಿಕೊಂಡರೆ ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಶುಕ್ರವಾರ ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ’ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಏನನ್ನು ತಿನ್ನಬೇಕು, ಎಷ್ಟು ತಿನ್ನಬೇಕು ಮತ್ತು ಯಾವಾಗ ತಿನ್ನಬೇಕು ಎಂಬ ಮೂರು ಪ್ರಶ್ನೆಗಳಿಗೆ ಸರಿಯಾದ ಉತ್ತರ ತಿಳಿದರೆ ಆರೋಗ್ಯಕರ ಜೀವನ ನಡೆಸುವುದು ಸುಲಭ. ಆಯುರ್ವೇದದ ಮಹರ್ಷಿ ವಾಗ್ಭಟರು ಪ್ರತಿಪಾದಿಸಿರುವ ಹಿತವಾದ ಆಹಾರವನ್ನು ಸೇವಿಸಿ, ಮಿತ ಪ್ರಮಾಣದಲ್ಲಿ ತಿನ್ನಿ ಮತ್ತು ಸಕಾಲದಲ್ಲಿ ಊಟ ಮಾಡಿ ಎಂಬ ಸರಳ ಸೂತ್ರವೇ ಆರೋಗ್ಯಕರ ಬದುಕಿನ ಆಧಾರ ಎಂದ ಶ್ರೀಗಳು, ಪ್ರತಿಯೊಬ್ಬರೂ ಊಟ ಮಾಡುವ ಮುನ್ನ ಇದು ನನಗೆ ಹಿತವೇ? ಎಷ್ಟು ಪ್ರಮಾಣದಲ್ಲಿ ತಿನ್ನಬೇಕು? ಈಗ ಇದನ್ನು ತಿನ್ನಲು ಸರಿಯಾದ ಸಮಯವೇ? ಎಂಬ ಪ್ರಶ್ನೆಗಳನ್ನು ತಮ್ಮಲ್ಲಿ ತಾವು ಕೇಳಿಕೊಳ್ಳಬೇಕು.

ಆಹಾರದ ಆಯ್ಕೆಗೆ ಹೆಚ್ಚಿನ ಮಹತ್ವ ನೀಡುತ್ತಾ, ಸಿಕ್ಕಿದ್ದನ್ನೆಲ್ಲ ತಿನ್ನುವ ಬದಲು ಆಯ್ಕೆ ಮಾಡಿ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳಬೇಕು. ನಮ್ಮ ಮುಂದೆ ಎಷ್ಟೇ ರುಚಿಕರ ಆಹಾರ ಇದ್ದರೂ, ದೇಹಕ್ಕೆ ಹಿತವಾದದ್ದು ಯಾವುದು ಮತ್ತು ಬಿಡಬೇಕಾದದ್ದು ಯಾವುದು ಎಂಬ ವಿವೇಕ ಇರಬೇಕು. ಆಹಾರದ ಆಯ್ಕೆಯೇ ಉತ್ತಮ ಆರೋಗ್ಯದ ಮೊದಲ ಹೆಜ್ಜೆ ಎಂದರು.
ಇದನ್ನೂ ಓದಿ:
ಆಹಾರದಷ್ಟೇ ಆಹಾರದ ಪ್ರಮಾಣವೂ ಮುಖ್ಯ. ಎಷ್ಟೇ ಉತ್ತಮ ಆಹಾರವಾಗಿದ್ದರೂ ಅಕಾಲದಲ್ಲಿ ಸೇವಿಸಿದರೆ ಅದು ದೇಹಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ಹಸಿವು ನೀಗಿಸುವುದು, ದೇಹಕ್ಕೆ ಶಕ್ತಿ ನೀಡುವುದು, ಆರೋಗ್ಯ ಕಾಪಾಡುವುದು ಮತ್ತು ದೀರ್ಘಾಯುಷ್ಯ ನೀಡುವುದೇ ಆಹಾರದ ನಿಜವಾದ ಗುರಿ. ಆದರೆ ಅಸಮಯದಲ್ಲಿ ಅಥವಾ ಅತಿಯಾಗಿ ಸೇವಿಸಿದ ಆಹಾರ ಈ ಎಲ್ಲ ಉದ್ದೇಶಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ ಎಂದು ಶ್ರಿಗಳು ಎಚ್ಚರಿಕೆ ನೀಡಿದರು.
ವೇ.ಮೂ. ರವೀಂದ್ರ ಕೊಡ್ಲಕೆರೆ ದಂಪತಿ ಶ್ರೀಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಲದ ಪರವಾಗಿ ಗುರುಭಿಕ್ಷಾಸೇವೆಯನ್ನು ನೆರವೇರಿಸಿದರು.

ಉಪಾಧಿವಂತ ಮಂಡಲದ ವೇ.ಮೂ. ಪರಮೇಶ್ವರ ಭಟ್ ಮಾರ್ಕಂಡೇ, ವೇ.ಮೂ. ರಮೇಶ ಪ್ರಸಾದ, ವೇ.ಮೂ. ಜಂಬೆ ಬಾಳ ಭಟ್ರು, ವೇ.ಮೂ. ಪ್ರಶಾಂತ ಹಿರೇಗಂಗೆ ಸೇರಿದಂತೆ ಉಪಾಧಿವಂತರು ಉಪಸ್ಥಿತರಿದ್ದರು. ಚಾತುರ್ಮಾಸ್ಯದ ಸಂಯೋಜಕರಾದ ಅಜಿತ ಗುಡ್ಗೆ, ಶ್ರೀಕೃಷ್ಣ ಎಂ. ಶಾಸ್ತ್ರಿ, ಸೌಮ್ಯಾ ಮಧ್ಯಸ್ಥ, ಶ್ರೀವತ್ಸ ಭೀಮನಕೋಣೆ, ದಿನ ಪ್ರಧಾನರಾಗಿ ಈಶ್ವರ ಗಾಂವ್ಕರ್ ದಂಪತಿ ಉಪಸ್ಥಿತರಿದ್ದರು.



