May 22, 2026
Friday, May 22, 2026
spot_img

ಎಬೋಲಾ ವೈರಸ್ ಭೀತಿ: ರಾಜ್ಯಾದ್ಯಂತ ಕಟ್ಟುನಿಟ್ಟಿನ ನಿಗಾ, ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದ ದೇಶಗಳಲ್ಲಿ ಹರಡುತ್ತಿರುವ ಎಬೋಲಾ ವೈರಸ್ ಸೋಂಕಿನ ಆತಂಕ ರಾಜ್ಯದಲ್ಲೂ ಮನೆ ಮಾಡಿದ್ದು, ಈ ಹಿನ್ನೆಲೆ ಕರ್ನಾಟಕ ಸರ್ಕಾರವು ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಿದೆ.

ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಅಂತಾರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ’ ಎಂದು ಘೋಷಿಸಿದ ಬೆನ್ನಲ್ಲೇ, ಭಾರತದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುತ್ತಿದೆ. ಇತ್ತ ರಾಜ್ಯದಲ್ಲೂ ಅರೋಗ್ಯ ಇಲಾಖೆಯು ಎಬೋಲಾ ವೈರಸ್ ಹರಡದಂತೆ ತಡೆಯಲು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ವಿಮಾನ ನಿಲ್ದಾಣಗಳಲ್ಲಿ ಅಲರ್ಟ್

ಪ್ರಸ್ತುತ ದೇಶದಲ್ಲಿ ಎಬೋಲಾ ಪ್ರಕರಣಗಳು ವರದಿಯಾಗಿಲ್ಲ. ಆದರೂ, ಅಂತಾರಾಷ್ಟ್ರೀಯ ಪ್ರಯಾಣ ಮತ್ತು ವ್ಯಾಪಾರ ವಹಿವಾಟುಗಳು ಹೆಚ್ಚಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ತುರ್ತು ಸೂಚನೆಯನ್ನು ನೀಡಿದ್ದು, ಸೋಂಕು ಹರಡದಂತೆ ತಡೆಯಲು ವಿಮಾನ ನಿಲ್ದಾಣಗಳಲ್ಲಿ ಮತ್ತು ಪ್ರವೇಶ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ನಡೆಸಲು ನಿರ್ದೇಶನ ನೀಡಿದೆ.

21 ದಿನಗಳ ಕಾಲ ಕ್ವಾರಂಟೈನ್

ಎಬೋಲಾ ಪೀಡಿತ ದೇಶಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರು ಕನಿಷ್ಠ 21 ದಿನಗಳ ಕಾಲ ಕ್ವಾರಂಟೈನ್ ಹಾಗೂ ರೋಗಲಕ್ಷಣ ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ.

ಎಬೋಲಾ ಲಕ್ಷಣಗಳು

ತೀವ್ರ ಜ್ವರ ಮತ್ತು ತಲೆನೋವು, ಸ್ನಾಯು ನೋವು ಮತ್ತು ಗಂಟಲು ನೋವು, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವು, ಕಣ್ಣು ಕೆಂಪಾಗುವುದು, ಸೋಂಕಿತ ವ್ಯಕ್ತಿಯ ರಕ್ತ, ಅಂಗಾಂಗಗಳು ಅಥವಾ ದೇಹದ ದ್ರವಗಳೊಂದಿಗೆ ನೇರ ಸಂಪರ್ಕ ಹೊಂದುವುದರಿಂದ ಅಥವಾ ಕಲುಷಿತಗೊಂಡ ಬಟ್ಟೆ, ಹಾಸಿಗೆ ಮತ್ತು ಸಿರಿಂಜ್‌ಗಳ ಮೂಲಕ ಈ ರೋಗ ಹರಡುತ್ತದೆ.

ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿಶೇಷ ವ್ಯವಸ್ಥೆ

ರಾಜ್ಯ ಸರ್ಕಾರವು, ಸೋಂಕು ತಡೆಗಟ್ಟಲು ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯನ್ನು ಐಸೋಲೇಷನ್ ಕೇಂದ್ರವಾಗಿ ಮತ್ತು ಎಪಿಡೆಮಿಕ್ ಡಿಸೀಸ್ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವಾಗಿ ನಿಗದಿಪಡಿಸಲಾಗಿದೆ. ಇನ್ನು ಮಂಗಳೂರಿನಲ್ಲಿ ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ ಮತ್ತು ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ.

ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ

ರಾಜ್ಯ ಆರೋಗ್ಯ ಇಲಾಖೆಯು ಪ್ರತ್ಯೇಕ ಕ್ವಾರಂಟೈನ್, ಐಸೋಲೇಷನ್, ರೆಫರಲ್ ಌಂಬುಲೆನ್ಸ್ ವ್ಯವಸ್ಥೆ, ಪಿಪಿಇ ಕಿಟ್​ಗಳು, ಅಗತ್ಯ ಔಷಧ ಸಂಗ್ರಹ, ರ್ಯಾಪಿಡ್ ರೆಸ್ಪಾನ್ಸ್ ತಂಡಗಳನ್ನು ಸಕ್ರಿಯಗೊಳಿಸುವುದು. ಚಿಕಿತ್ಸೆ ನೀಡಲು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡುವುದು ಸೇರಿದಂತೆ ಸೋಂಕು ಹರದಂತೆ ಮುಂಜಾಗ್ರತಾ ಕ್ರಮಕೈಗೊಂಡಿದೆ.

ಸಾರ್ವಜನಿಕರಿಗೆ ಸೂಚನೆ

ಇದೇ ವೇಳೆ ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೊಳಗಾಗಬಾರದು ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ನಂಬಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !