ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು; ಪ್ಲಾಸ್ಟಿಕ್‌ ಚೀಲಗಳಲ್ಲಿ ತುಂಬಿದ ಗ್ಯಾಸ್‌ ಖರೀದಿಸುತ್ತಿದ್ದಾರೆ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕವಾಗಿ ಚೀನಾದೊಂದಿಗೆ ಕೈ ಮಿಲಾಯಿಸಿ ಭಾರತವನ್ನು ಹಣಿಯುವ ಕನಸು ಕಾಣುತ್ತಿದ್ದ ಪಾಕಿಸ್ತಾನವೀಗ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಮಿತಿಮೀರಿದ ಹಣದುಬ್ಬರ ಅಲ್ಲಿನ ಜನರನ್ನು ಕಂಗಾಲಾಗಿಸಿದೆ. ಕುಸಿಯುತ್ತಿರುವ ಆರ್ಥಿಕತೆಯ ಹೊಡೆತದ ಅಡಿಯಲ್ಲಿ ತತ್ತರಿಸುತ್ತಿರುವ ಪಾಕಿಸ್ತಾನಿ ಸರ್ಕಾರವು ತನ್ನ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾಗಿದೆ. ಇದರ ಪರಿಣಾಮವಾಗಿ ಜನರು ಪ್ಲಾಸ್ಟಿಕ್‌ ಬ್ಯಾಗ್‌ ಗಳಲ್ಲಿ ಅಡುಗೆಅನಿಲ (ಎಲ್‌ಪಿಜಿ)ಯನ್ನು ತುಂಬಿಕೊಂಡು ಹೋಗುವ ದುಸ್ಥಿತಿ ಒದಗಿದೆ.

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಪಾಕಿಸ್ತಾನಿಗಳು ಎಲ್‌ಪಿಜಿಯನ್ನು ಸಂಗ್ರಹಿಸಲು ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದಾರೆ. ವರದಿಗಳ ಪ್ರಕಾರ, ಖೈಬರ್ ಪಖ್ತುಂಖ್ವಾದ ಕರಕ್ ಜಿಲ್ಲೆಯ ಜನರಿಗೆ 2007 ರಿಂದ ಗ್ಯಾಸ್ ಸಂಪರ್ಕವನ್ನು ನೀಡಲಾಗಿಲ್ಲ. ಇದಲ್ಲದೇ ಹಂಗು ನಗರದಲ್ಲಿ ಅನಿಲ ಪೂರೈಕೆಯ ಪೈಪ್‌ ಒಡೆದು ಹೋಗಿರುವ ಪರಿಣಾಮ ನಗರವು ಎರಡು ವರ್ಷಗಳಿಂದ ಗ್ಯಾಸ್‌ ನಿಂದ ವಂಚಿತವಾಗಿದೆ. ಅಲ್ಲದೇಚ ಮಿತಿ ಮೀರಿದ ಹಣದುಬ್ಬರವು ಜನರಿಗೆ ಅಗ್ಗದ ಮಾರ್ಗಗಳಿಗೆ ಮೊರೆ ಹೋಗುವಂತೆ ಮಾಡಿದೆ. ವಾಣಿಜ್ಯ ಗ್ಯಾಸ್‌ ಸಿಲಿಂಟರ್‌ ಬೆಲೆಯು 10,000 ಪಾಕಿಸ್ತಾನಿ ರೂಪಾಯಿಗಳಷ್ಟಿದೆ. ಜನಸಾಮಾನ್ಯರು ಇಷ್ಟು ಹಣಕೊಟ್ಟು ಖರೀದಿಸಲು ಸಾಧ್ಯವಿಲ್ಲವಾದ್ದರಿಂದ ಅವರು 500 ರಿಂದ 900 ರೂಪಾಯಿ ಕೊಟ್ಟು ಪ್ಲಾಸ್ಟಿಕ್‌ ಚೀಲಗಳಲ್ಲೇ ಗ್ಯಾಸ್‌ ತುಂಬಿಸಿಕೊಂಡು ಹೋಗುತ್ತಿದ್ದಾರೆ. ಹಣ ಪಾವತಿಸಲಾಗದೇ ಅವರು ಈ ವಿಧಾನದ ಮೊರೆ ಹೋಗಿರುವುದು ಒಂದು ಕಡೆಯಾದರೆ, ಪ್ಲಾಸ್ಟಿಕ್‌ ಚೀಲಗಳು ಅಭದ್ರವಾಗಿರುವುದರಿಂದ ಗ್ಯಾಸ್‌ ಸ್ಪೋಟಗಳ ಸಂಭವವೂ ಹೆಚ್ಚು, ಆದರೂ ಜೀವದ ಜೊತೆ ಆಟವಾಡುತ್ತ ಜನರು ಪ್ಲಾಸ್ಟಿಕ್‌ ಚೀಲಗಳಲ್ಲೇ ಗ್ಯಾಸ್‌ ಖರೀದಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!