ಹೊಸದಿಗಂತ ಡಿಜಿಟಲ್ ಡೆಸ್ಕ್:
ಚುನಾವಣಾ ಪ್ರಚಾರದ ವೇಳೆ ಈಕ್ವೆಡಾರ್ ಅಧ್ಯಕ್ಷೀಯ ಅಭ್ಯರ್ಥಿ ಫರ್ನಾಂಡೊ ವಿಲ್ಲಾವಿಸೆನ್ಸಿಯೋ (59) ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಈಕ್ವೆಡಾರ್ ರಾಷ್ಟ್ರಪತಿ ಸ್ಥಾನಕ್ಕೆ ಇದೇ ಆಗಸ್ಟ್ 20 ರಂದು ಚುನಾವಣೆ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ರ‍್ಯಾಲಿ ಮುಗಿಸಿಕೊಂಡು ಕಾರು ಹತ್ತುತ್ತಿರುವಾಗ ದುಷ್ಕರ್ಮಿಗಳು ಗುಂಡು ಹಾರಿಸಿರುವ ಘಟನೆ ಕ್ವಿಟೋದಲ್ಲಿ ಬುಧವಾರ ರಾತ್ರಿ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಘಟನೆ ದಕ್ಷಿಣ ಅಮೆರಿಕದ ದೇಶದಲ್ಲಿ ಸಂಚಲನ ಮೂಡಿಸಿದೆ.
ಹತ್ಯೆಗೀಡಾದ ಅಭ್ಯರ್ಥಿ ಫರ್ನಾಂಡೊ ಅವರು ಭ್ರಷ್ಟಾಚಾರ ಮತ್ತು ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಧ್ವನಿ ಎತ್ತಿದ್ದ ಹಿನ್ನೆಲೆಯಲ್ಲಿ ಈ ಹತ್ಯೆ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಫರ್ನಾಂಡೊ ವಿಲ್ಲಾವಿಸೆನ್ಸಿಯೋ ಹತ್ಯೆಯನ್ನು ಖಂಡಿಸಿರುವ ಅಧ್ಯಕ್ಷ ಗಿಲ್ಲೆರ್ಮೊ ಲಾಸ್ಸೊ ಅವರು ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದರು. ಹತ್ಯೆಯ ಹಿಂದೆ ಸಂಘಟಿತ ಅಪರಾಧವಿದೆ ಎಂದು ಕಂಡು ಬಂದಿದೆ. ಸಂಘಟಿತ ವ್ಯವಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.