August 7, 2026
Friday, August 7, 2026
spot_img

4,500 ಕೋಟಿ ರೂ. ವಂಚನೆ ಪ್ರಕರಣಕ್ಕೆ ಇಡಿ ಎಂಟ್ರಿ: ಶಿವಾನಂದ ನೀಲಣ್ಣವರ್ ಮನೆಗಳ ಮೇಲೆ ದಾಳಿ, ದಾಖಲೆಗಳ ಪರಿಶೀಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

4,500 ಕೋಟಿ ವಂಚನೆ ಪ್ರಕರಣಕ್ಕೆ ಇದೀಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿರುವ ಶಿವಂ ಅಸೋಸಿಯೇಟ್ ಸಂಸ್ಥೆಯ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಕೂಡ ತನಿಖೆ ಆರಂಭಿಸಿದ್ದು, ಬೆಳಗಾವಿಯ ಹಲವು ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಿದೆ.

ಪ್ರಕರಣದಲ್ಲಿ ಹಣದ ಅಕ್ರಮ ವರ್ಗಾವಣೆ ಹಾಗೂ ಆಸ್ತಿ ವಿವರಗಳ ಕುರಿತು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮನೆ, ಕಚೇರಿ ಸೇರಿ ಹಲವು ಸ್ಥಳಗಳಲ್ಲಿ ಶೋಧ

ಮಂಗಳೂರು ಹಾಗೂ ಗೋವಾ ಘಟಕದ ಇಡಿ ಅಧಿಕಾರಿಗಳ ತಂಡವು ಬೆಳಗಾವಿಯ ಶಿವಬಸವನಗರದಲ್ಲಿರುವ ಶಿವಾನಂದ ನೀಲಣ್ಣನವರ್ ಅವರ ನಿವಾಸ, ಬಡಕುಂದ್ರಿಯ ಮನೆ ಹಾಗೂ ಚಿಕ್ಕೋಡಿಯಲ್ಲಿರುವ ಆಪ್ತರ ನಿವಾಸ ಸೇರಿ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತು. ಶೋಧದ ವೇಳೆ ದಾಖಲೆಗಳು, ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿ ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಕುಟುಂಬ ಸದಸ್ಯರು ಹಾಗೂ ಆಪ್ತರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ:

ಸಿಐಡಿ ತನಿಖೆ ನಡುವೆ ಇಡಿ ಎಂಟ್ರಿ

ಈ ಪ್ರಕರಣವು ಈಗಾಗಲೇ ಸಿಐಡಿ ತನಿಖೆಯಲ್ಲಿದ್ದು, ಅದರ ನಡುವೆಯೇ ಇಡಿ ಪ್ರವೇಶಿಸಿರುವುದು ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ಅಕ್ರಮ ಹಣಕಾಸು ವ್ಯವಹಾರ ಮತ್ತು ಹಣದ ಮೂಲದ ಬಗ್ಗೆ ಪ್ರತ್ಯೇಕವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಏನಿದು ಬಹುಕೋಟಿ ವಂಚನೆ ಪ್ರಕರಣ?

2016ರಲ್ಲಿ ಆರಂಭವಾದ ಶಿವಂ ಅಸೋಸಿಯೇಟ್ ಸಂಸ್ಥೆ ಹೆಚ್ಚಿನ ಬಡ್ಡಿದರದ ಭರವಸೆ ನೀಡಿ ಸಾವಿರಾರು ಜನರಿಂದ ಹಣ ಸಂಗ್ರಹಿಸಿದೆ ಎಂಬ ಆರೋಪ ಎದುರಿಸುತ್ತಿದೆ. ಅಗತ್ಯ ನಿಯಂತ್ರಣ ಸಂಸ್ಥೆಗಳ ಅನುಮತಿ ಇಲ್ಲದೆ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಪಡೆದಿದ್ದು, ಹಣವನ್ನು ದುರ್ಬಳಕೆ ಮಾಡಲಾಗಿದೆ ಎಂಬ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.

ಸುಮಾರು 35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರು ಮತ್ತು 4,500 ಕೋಟಿಗೂ ಅಧಿಕ ವಹಿವಾಟು ಈ ಪ್ರಕರಣದಲ್ಲಿ ಉಲ್ಲೇಖವಾಗಿದೆ. ಈ ಸಂಬಂಧ ಶಿವಾನಂದ ನೀಲಣ್ಣನವರ್ ಅವರನ್ನು ಈ ಹಿಂದೆ ಬಂಧಿಸಲಾಗಿದ್ದು, ಬಳಿಕ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದರು. ಇದೀಗ ಇಡಿ ತನಿಖೆಯಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !