September 14, 2026
Monday, September 14, 2026
spot_img

KPSC ಹಗರಣ | ಲಕ್ನೋದಲ್ಲೂ ಇಡಿ ದಾಳಿ: ಅಲ್ಲಿಯೂ ಸಿಗಲಿಲ್ಲ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಪಿಎಸ್‌ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಾರಿ ನಿರ್ದೇಶನಾಲಯ ಉತ್ತರ ಪ್ರದೇಶದ ಲಕ್ನೋಗೆ ತೆರಳಿ ಶೋಧ ನಡೆಸಿದೆ.

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಾಪತ್ತೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದು, ಇದೇ ಪ್ರಕರಣದ ಬೆನ್ನತ್ತಿದ ಅಧಿಕಾರಿಗಳು ಲಕ್ನೋದ ಹಳ್ಳಿಯೊಂದರಲ್ಲಿ ಇರುವ ನಿವಾಸದ ಮೇಲೂ ದಿಢೀರ್‌ ದಾಳಿ ನಡೆಸಿದ್ದಾರೆ. ಆದರೆ ಜ್ಞಾನೇಂದ್ರ ಕುಮಾರ್‌ ಲಕ್ನೋದ ನಿವಾಸದಲ್ಲಿಯೂ ಕಾಣಿಸಿಲ್ಲ.

ಜ್ಞಾನೇಂದ್ರ ಅವರ ಲಕ್ನೋ ನಿವಾಸದಲ್ಲಿ ವಯಸ್ಸಾದ ತಂದೆ ಹಾಗೂ ಅವರಿಗಾಗಿ ನಿಯೋಜಿಸಿದ್ದ ಕೇರ್‌ ಟೇಕರ್‌ ಮಾತ್ರ ಇದ್ದರು. ಜ್ಞಾನೇಂದ್ರ ಅವರ ತಾಯಿ ಈ ಹಿಂದೆಯೇ ನಿಧನರಾಗಿದ್ದಾರೆ. ಇನ್ನು ಅವರ ಕುಟುಂಬ ಸದಸ್ಯರಾದ ಚಿಕ್ಕಪ್ಪ, ಸಹೋದರರನ್ನು ಇಡಿ ಸಂಪರ್ಕಿಸುವ ಪ್ರಯತ್ನ ಮಾಡಿದೆ. ಆದರೆ ಯಾರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಪ್ರತಿಯೊಬ್ಬರ ಫೋನ್‌ ಕೂಟ ಸ್ವಿಚ್‌ ಆಫ್‌ ಆಗಿರುವುದು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.

ಏಳು ಗಂಟೆಯಲ್ಲಿ ದಾಳಿ ಅಂತ್ಯ

ಬೆಂಗಳೂರಿನ ಜಯಮಹಲ್‌ ರಸ್ತೆಯಲ್ಲಿದ್ದ ಜ್ಞಾನೇಂದ್ರ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದು, ಏಳು ಗಂಟೆಗಳಲ್ಲಿ ದಾಳಿಯನ್ನು ಅಂತ್ಯಗೊಳಿಸಿದ್ದಾರೆ. ಮನೆಯಲ್ಲಿ ಸಣ್ಣ ಪುಟ್ಟ ಉಪಯುಕ್ತ ದಾಖಲೆಗಳು ಮಾತ್ರ ಲಭ್ಯವಾಗಿದೆ. ಜ್ಞಾನೇಂದ್ರ ಅವರ ಫೋನ್‌, ಲ್ಯಾಪ್‌ಟಾಪ್‌ ಹಾಗೂ ಇನ್ನಿತರ ಪ್ರಮುಖ ದಾಖಲೆಗಳು ಕಾಣೆಯಾಗಿವೆ.

ಮನೆಯಲ್ಲಿ ಏನೂ ಇರಲಿಲ್ಲ

ಜ್ಞಾನೇಂದ್ರ ಅವರು ಹೊರಡುವಾಗ ಫೋನ್‌, ಲ್ಯಾಪ್‌ಟಾಪ್‌, ಅಗತ್ಯ ದಾಖಲೆ, ದಿನಬಳಸುವ ವಸ್ತುಗಳು, ಬಟ್ಟೆಗಳು ಎಲ್ಲವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮನೆಯಲ್ಲಿ ಫರ್ನಿಚರ್‌ ಹಾಗೂ ಹಳೆಯ ಬಟ್ಟೆಗಳು ಮಾತ್ರ ಇವೆ. ಆಸ್ತಿ ಇನ್ನಿತರ ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಒಂದು ದಾಖಲೆಯೂ ಮನೆಯಲ್ಲಿ ಇಲ್ಲ. ಮಹಜರು ಪ್ರಕ್ರಿಯೆ ವೇಳೆ ಅಕ್ಕ ಪಕ್ಕದ ಮನೆಯವರು ಸಾಕ್ಷಿಗೆ ಸಹಿ ಹಾಕಲು ಕೂಡ ನಿರಾಕರಿಸಿದ್ದಾರೆ.

ತರಾತುರಿಯಲ್ಲಿ ಡಬಲ್‌ ಹಣ ನೀಡಿ ಟಿಕೆಟ್‌ ಬುಕ್‌

ಆಗಸ್ಟ್‌ 20ರಂದು ಜ್ಞಾನೇಂದ್ರ ಕುಮಾರ್‌ ದೆಹಲಿಗೆ ತೆರಳಿದ್ದಾರೆ. ಇದ್ದಕ್ಕಿದ್ದಂತೆಯೇ ಡಿಸೈಡ್‌ ಮಾಡಿ ಪ್ಯಾಕಿಂಗ್‌ ಮಾಡಿ ಅವರು ಹೊರಟಿದ್ದಾರೆ ಎಂದು ಹೇಳಲಾಗಿದೆ. ಫ್ಲೈಟ್‌ ಹೊರಡುವ ಒಂದುವರೆ ಗಂಟೆ ಮುನ್ನವಷ್ಟೇ ಟಿಕೆಟ್‌ ಬುಕ್‌ ಆಗಿದೆ. ಬರೋಬ್ಬರಿ 30,253 ರೂಪಾಯಿ ಹಣ ನೀಡಿ ಅರ್ಜೆಂಟ್‌ ಆಗಿ ಟಿಕೆಟ್‌ ಬುಕ್‌ ಮಾಡಿ ಹೋಗಿರುವುದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !