September 14, 2026
Monday, September 14, 2026
spot_img

ಗಣೇಶೋತ್ಸವದಲ್ಲೂ ‘ದಳಪತಿ’ ಕ್ರೇಜ್: ಸಿಎಂ ವಿಜಯ್ ಅಭಿಮಾನಿಗಳಿಂದ ವಿಶಿಷ್ಟ ವಿನಾಯಕನ ಪ್ರತಿಷ್ಠಾಪನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅದೇ ರೀತಿ ತಮಿಳುನಾಡಿನಲ್ಲಿ ಈ ಬಾರಿ ವಿಭಿನ್ನ ಗಣೇಶ ಮೂರ್ತಿಗಳು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರ ಸೂಪರ್ ಹಿಟ್ ಸಿನಿಮಾ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಗಣಪತಿಯ ಮೂರ್ತಿಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

‘ಗಿಲ್ಲಿ’ ಚಿತ್ರದ ಪಾತ್ರಗಳೇ ಪ್ರೇರಣೆ

ಚೆನ್ನೈನ ಆರ್.ಕೆ. ನಗರದಲ್ಲಿ ಈ ವಿಶಿಷ್ಟ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ವಿಜಯ್ ಅಭಿನಯದ, 2004ರ ಬ್ಲಾಕ್‌ಬಸ್ಟರ್ ಚಿತ್ರ ‘ಗಿಲ್ಲಿ’ಸಿನಿಮಾದ ಪಾತ್ರಗಳು ಮತ್ತು ಸನ್ನಿವೇಶಗಳನ್ನು ಆಧರಿಸಿ ಈ ವಿಗ್ರಹಗಳನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಚಿತ್ರದಲ್ಲಿ ವಿಜಯ್ ನಿರ್ವಹಿಸಿದ್ದ ‘ಸರವಣವೇಲು’ ಮತ್ತು ನಟಿ ತ್ರಿಶಾ ಕೃಷ್ಣನ್ ಅವರ ‘ಧನಲಕ್ಷ್ಮಿ’ ಪಾತ್ರಗಳ ಆಕೃತಿಗಳು ಹಬ್ಬದ ಪೆಂಡಾಲ್‌ನಲ್ಲಿ ಕಂಗೊಳಿಸುತ್ತಿದ್ದು, ಯುವ ಸಮೂಹವನ್ನು ಕೈಬೀಸಿ ಕರೆಯುತ್ತಿವೆ.

ರಾಜ್ಯದ ಜನತೆಗೆ ಸಿಎಂ ವಿಜಯ್ ಶುಭ ಹಾರೈಕೆ

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ರಾಜ್ಯದ ಜನತೆಗೆ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. “ಈ ಪವಿತ್ರ ದಿನದಂದು ಆರಂಭವಾಗುವ ಎಲ್ಲಾ ಸತ್ಕಾರ್ಯಗಳು ಭಗವಾನ್ ವಿನಾಯಕನ ಕೃಪೆಯಿಂದ ಯಶಸ್ವಿಯಾಗಿ ನೆರವೇರಲಿ. ಪ್ರತಿಯೊಬ್ಬರ ಕುಟುಂಬದಲ್ಲೂ ಸಂತೋಷ, ಶಾಂತಿ ಮತ್ತು ಸಮೃದ್ಧಿ ನೆಲೆಸಲಿ” ಎಂದು ಸಿಎಂ ವಿಜಯ್ ಆಶಿಸಿದ್ದಾರೆ.

ಇದನ್ನೂ ಓದಿ:

ಮತ್ತೊಂದೆಡೆ, ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರೂ ಕೂಡ ‘X’ ಮೂಲಕ ಶುಭ ಕೋರಿದ್ದು, “ವಿಘ್ನನಿವಾರಕನಾದ ಗಣೇಶನು ಎಲ್ಲರಿಗೂ ಜ್ಞಾನ, ಆರೋಗ್ಯ ಮತ್ತು ಯಶಸ್ಸನ್ನು ಕರುಣಿಸಲಿ. ಈ ಹಬ್ಬವು ನಮ್ಮಲ್ಲಿ ಒಗ್ಗಟ್ಟು ಮತ್ತು ಸೌಹಾರ್ದತೆಯನ್ನು ಹೆಚ್ಚಿಸಲಿ. ಸಮೃದ್ಧ ತಮಿಳುನಾಡು ಹಾಗೂ ಪ್ರಗತಿಪರ ‘ವಿಕಸಿತ ಭಾರತ’ ನಿರ್ಮಾಣಕ್ಕಾಗಿ ನಾವೆಲ್ಲರೂ ಒಟ್ಟಾಗಿ ಶ್ರಮಿಸಲು ಈ ಹಬ್ಬ ಪ್ರೇರಣೆಯಾಗಲಿ” ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಮತ್ತು ಭಕ್ತಿಯ ಈ ಅಪರೂಪದ ಸಂಗಮವು ತಮಿಳುನಾಡಿನ ಚೌತಿ ಸಂಭ್ರಮಕ್ಕೆ ಮತ್ತಷ್ಟು ರಂಗು ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !