October 11, 2026
Sunday, October 11, 2026
spot_img

ಗುರುಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾಜಿ ಯೋಧನ ಮೇಲೆ ಅಮಾನವೀಯ ಹಲ್ಲೆ: FIR ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ವಾಯುಸೇನೆಯ (IAF) ನಿವೃತ್ತ ಗ್ರೂಪ್ ಕ್ಯಾಪ್ಟನ್ ಅವರ ಮೇಲೆ ಗುರುಗ್ರಾಮದ ಪಾರ್ಕಿಂಗ್ ಸ್ಥಳದಲ್ಲಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಲ್ಲೆಯ ತೀವ್ರತೆಗೆ ನಿವೃತ್ತ ಅಧಿಕಾರಿಯ ಕೈ ಮೂಳೆ ಮುರಿದಿದ್ದು, ಸದ್ಯ ಘಟನೆಗೆ ಸಂಬಂಧಿಸಿದಂತೆ ಗುರುಗ್ರಾಮ ಪೊಲೀಸರುಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.

ಕುಟುಂಬದ ಸಮ್ಮುಖದಲ್ಲೇ ನಡೆದ ದೌರ್ಜನ್ಯ

ಸೆಪ್ಟೆಂಬರ್ 10 ರಂದು ಸೆಕ್ಟರ್ 65 ರ ಪೊಲೀಸ್ ಠಾಣಾ ವ್ಯಾಪ್ತಿಯ ‘ಸಿಗ್ನೇಚರ್ ಮ್ಯಾಗ್ನಮ್’ ಆವರಣದಲ್ಲಿ ಈ ಘಟನೆ ನಡೆದಿದೆ. ನಿವೃತ್ತ ಗ್ರೂಪ್ ಕ್ಯಾಪ್ಟನ್ ಅಮಿತ್ ಕುಮಾರ್ ಗುಪ್ತಾ ಅವರು ತಮ್ಮ ಕುಟುಂಬದೊಂದಿಗೆ ಅಲ್ಲಿನ ರೆಸ್ಟೋರೆಂಟ್‌ವೊಂದಕ್ಕೆ ಊಟಕ್ಕೆ ತೆರಳಿದ್ದರು. ಹೋಟೆಲ್ ಮುಂಭಾಗದಲ್ಲಿ ಕುಟುಂಬದವರನ್ನು ಇಳಿಸಿದ ಕ್ಯಾಪ್ಟನ್ ಗುಪ್ತಾ, ನಂತರ ತಮ್ಮ ಕಾರನ್ನು ನಿಲ್ಲಿಸಲು ಪಾರ್ಕಿಂಗ್ ಜಾಗಕ್ಕೆ ಹೋಗಿದ್ದಾರೆ. ಈ ವೇಳೆ ವಾಹನವನ್ನು ನಿಲ್ಲಿಸುವ ವಿಚಾರವಾಗಿ ಅಲ್ಲಿನ ಪಾರ್ಕಿಂಗ್ ಸಿಬ್ಬಂದಿ ಹಾಗೂ ಇವರ ನಡುವೆ ಸಣ್ಣ ಮಾತಿನ ಚಕಮಕಿ ಆರಂಭವಾಗಿದೆ.

ಕೈ ಮೂಳೆ ಮುರಿತ

ಮಾತಿಗೆ ಮಾತು ಬೆಳೆದು ಪಾರ್ಕಿಂಗ್ ಸಿಬ್ಬಂದಿ, ದೇಶದ ಮಾಜಿ ಸೈನಿಕನೆಂಬ ಕನಿಷ್ಠ ಗೌರವವೂ ಇಲ್ಲದೆ ಕ್ಯಾಪ್ಟನ್ ಗುಪ್ತಾ ಅವರ ಮೇಲೆ ಮುಗಿಬಿದ್ದಿದ್ದಾರೆ. ಅಸಭ್ಯ ಪದಗಳಿಂದ ನಿಂದಿಸಿ, ಅವರ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗುಪ್ತಾ ಅವರ ಕೈ ಮೂಳೆ ಮುರಿದಿದ್ದು, ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

FIR ದಾಖಲು

ಗುರುಗ್ರಾಮದ ಎಸಿಪಿ ಅಭಿಲಕ್ಷ್ ಜೋಶಿ ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದು, ಸೆಪ್ಟೆಂಬರ್ 10 ರಂದು ಘಟನೆ ನಡೆದ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಕ್ಯಾಪ್ಟನ್ ಅವರ ಹೇಳಿಕೆ ಪಡೆಯಲಾಗಿತ್ತು. ಆದರೆ ಆರಂಭದಲ್ಲಿ ಅವರು ಯಾವುದೇ ಕಾನೂನು ಕ್ರಮ ಜರುಗಿಸುವುದು ಬೇಡ ಎಂದು ತಿಳಿಸಿದ್ದರು. ಆದರೆ, ಸೆಪ್ಟೆಂಬರ್ 13 ರಂದು ಗಾಯದ ತೀವ್ರತೆ ಹಾಗೂ ಅನ್ಯಾಯದ ವಿರುದ್ಧ ಹೋರಾಡಲು ಅವರು ದೂರು ನೀಡಿದ್ದಾರೆ. ಅದರ ಆಧಾರದ ಮೇಲೆ ನಾವು ಕೇಸ್ ದಾಖಲಿಸಿಕೊಂಡಿದ್ದೇವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ:

ಸಿಸಿಟಿವಿ ಮೂಲಕ ಆರೋಪಿಗಳ ಪತ್ತೆ

ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಪೊಲೀಸರು, ಹಲ್ಲೆ ನಡೆಸಿದ ಎಲ್ಲಾಆರೋಪಿಗಳನ್ನು ಈಗಾಗಲೇ ಗುರುತಿಸಿದ್ದಾರೆ. ವೈದ್ಯಕೀಯ ವರದಿ ಮತ್ತು ಸಿಸಿಟಿವಿ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಗಳ ಹೆಡೆಮುರಿ ಕಟ್ಟಲು ಪೊಲೀಸರು ಮಜುಂದಾಗಿದ್ದು, ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸಿಪಿ ಭರವಸೆ ನೀಡಿದ್ದಾರೆ.

Must Read