ಹೊಸದಿಗಂತ ವರದಿ ಹಾಸನ:
ಸಾಲದ ಬಾಧೆ ತಾಳಲಾರದೆ ರೈತರೊಬ್ಬರು ಹೊಲದಲ್ಲೇ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಗದೀಶ್ (45) ಮೃತ ರೈತ. ಸ್ವಂತ ಜಮೀನಿನ ಜೊತೆಗೆ ಎಂಟು ಎಕರೆ ಜಮೀನನ್ನು ಗುತ್ತಿಗೆ ಪಡೆದು ಶುಂಠಿ, ಆಲೂಗೆಡ್ಡೆ ಹಾಗೂ ಮೆಕ್ಕೆಜೋಳ ಬೆಳೆದಿದ್ದರು. ಕಾವೇರಿ ಗ್ರಾಮೀಣ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಸಂಘಗಳು ಹಾಗೂ ಕೈಸಾಲ ಸೇರಿ 10 ಲಕ್ಷ ರೂಗೂ ಹೆಚ್ಚು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ.
ಬ್ಯಾಂಕ್‌ನಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಪತ್ನಿಯ ಒಡವೆಗಳನ್ನು ಅಡವಿಟ್ಟು ಸಾಲದ ಹಣ ಪಾವತಿಸಿದ್ದರು. ಬಳಿಕ ಮತ್ತೆ ಒಡವೆಗಳನ್ನು ಅಡವಿಟ್ಟು ಸಾಲ ಮಾಡಿ ಎರಡು ಬೋರ್‌ವೆಲ್‌ಗಳನ್ನು ಕೊರೆಸಿದರೂ ನೀರು ಸಿಗಲಿಲ್ಲ. ಮಳೆ ಕೊರತೆಯಿಂದ ಬೆಳೆಗಳೂ ಸಂಪೂರ್ಣ ಹಾನಿಯಾಗಿದ್ದವು. ಇದರಿಂದ ಮನನೊಂದ ಜಗದೀಶ್ ಹೊಲದಲ್ಲೇ ಕಳೆನಾಶಕ ಸೇವಿಸಿದ್ದರು. ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗೊರೂರು ಪೊಲೀಸರು ಪ್ರಕರಣ ದಾಖಲಿಸಿ ಪರಿಶೀಲನೆ ನಡೆಸಿದ್ದಾರೆ.



