September 27, 2026
Sunday, September 27, 2026
spot_img

ಸತೀಶ್‌ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್‌, ಬೆಳಗಾವಿ ಸೇರಿದಂತೆ 6 ಕಡೆ ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳ್ಳಂಬೆಳಗ್ಗೆ ಲೋಕೋಪಯೋಗಿ ಸಚಿವ ಜಾರಕಿಹೊಳಿ ಅವರ ಸಹೋದರಿ ಪತಿಯೂ ಆಗಿರುವ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಯ ಮನೆ ಹಾಗೂ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ಭಾರೀ ದಾಳಿ ನಡೆಸಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಆರೋಪದ ಹಿನ್ನೆಲೆ ಇಂದು ದಾಳಿ ನಡೆದಿದೆ.

ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತರಾಗಿರುವ ವೈ. ಮಂಜುನಾಥ್ ಅವರಿಗೆ ಸೇರಿದ ಒಟ್ಟು 6 ಸ್ಥಳಗಳ ಮೇಲೆ ಇಡಿ ಅಧಿಕಾರಿಗಳ ತಂಡ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ಕೈಗೊಂಡಿದೆ.
ಬೆಳಗಾವಿಯ ದೂರದರ್ಶನ ಕೇಂದ್ರದ ಬಳಿ ಇರುವ ವೈ. ಮಂಜುನಾಥ್ ನಿವಾಸಕ್ಕೆ ಅಧಿಕಾರಿಗಳು ಲಗ್ಗೆ ಇಟ್ಟಿದ್ದಾರೆ. ಗೋವಾ ಮತ್ತು ಬೆಂಗಳೂರಿನ ಜಾರಿ ನಿರ್ದೇಶನಾಲಯದ ಜಂಟಿ ಅಧಿಕಾರಿಗಳ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡಿದೆ. 

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ತನಿಖೆಗೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ 10 ಕ್ಕೂ ಹೆಚ್ಚು ಅರೆಸೇನಾ ಪಡೆಯ ಯೋಧರ ಕಾವಲಿನಲ್ಲಿ ಈ ದಾಳಿ ನಡೆಸಲಾಗಿದೆ. ವೈ. ಮಂಜುನಾಥ್ ಅವರು ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ಬೆಳಗಾವಿ ವಲಯದ ಪ್ರಮುಖ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಜುನಾಥ್ ಅವರ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಒಟ್ಟು ಆರು ಕಡೆಗಳಲ್ಲಿ ಇಡಿ ಅಧಿಕಾರಿಗಳು ಮಹತ್ವದ ದಾಖಲೆ ಪತ್ರಗಳು, ಆಸ್ತಿ ಪಾಸ್ತಿ ವಿವರ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Must Read