ʼಮಹಾʼ ಬಿಕ್ಕಟ್ಟಿನ ನಡುವೆಯೇ ಸಂಜಯ್‌ ರಾವುತ್‌ ಗೆ ಬಂತು ಈಡಿ ಸಮನ್ಸ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಬಿಗಡಾಯಿಸುತ್ತಿರುವ ಬೆನ್ನಲ್ಲೇ ಶಿವಸೇನೆ ವಕ್ತಾರ ಸಂಜಯ್‌ ರಾವತ್‌ ಗೆ ಜಾರಿ ನಿರ್ದೇಶನಾಲಯ (ಈಡಿ) ಸಮನ್ಸ್‌ ನೀಡಿದೆ. ಪ್ರವೀಣ್ ರಾವತ್ ಮತ್ತು ಪತ್ರಾ ಚಾಲ್ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರಿಗೆ ಜಾರಿ ನಿರ್ದೇಶನಾಲಯ (ಈಡಿ) ಮಂಗಳವಾರ ಸಮನ್ಸ್ ಜಾರಿ ಮಾಡಿದೆ. ಈ ಹಿಂದೆಯೂ ಕೂಡ ಮನಿ ಲಾಂಡರಿಂಗ್‌ ಕೇಸ್‌ ನಲ್ಲಿ ಅವರ ಕೆಲವು ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಸಮನ್ಸ್‌ ಜಾರಿಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಸಂಜಯ್‌ ರಾವತ್‌ ಯಾವುದೇ ಕಾರಣಕ್ಕೂ ನಾನು ಗುವಾಹಟಿಯ ದಾರಿ ಹಿಡಿಯುವುದಿಲ್ಲ. ಇಡಿಯವರು ನನ್ನನ್ನು ಧಾರಾಳವಾಗಿ ಬಂಧಿಸಬಹುದು ಎಂದಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ರಾವತ್‌ “ಈಗಷ್ಟೇ ಇಡಿ ನನಗೆ ಸಮನ್ಸ್ ನೀಡಿದೆ ಎಂದು ತಿಳಿದು ಬಂದಿದೆ. ಒಳ್ಳೆಯದು ! ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ನಾವು, ಬಾಳಾಸಾಹೇಬರ ಶಿವಸೈನಿಕರು ದೊಡ್ಡ ಯುದ್ಧ ಮಾಡುತ್ತಿದ್ದೇವೆ. ಇದು ನನ್ನನ್ನು ತಡೆಯುವ ಷಡ್ಯಂತ್ರ. ನನ್ನ ಶಿರಚ್ಛೇದ ಮಾಡಿದರೂ ನಾನು ಗುವಾಹಟಿ ಮಾರ್ಗದಲ್ಲಿ ಹೋಗುವುದಿಲ್ಲ. ನನ್ನನ್ನು ಬಂಧಿಸಿ” ಎಂದು ಬರೆದುಕೊಂಡಿದ್ದಾರೆ. ಶಿವಸೇನೆಯ ಇತರರು ಇದು ಬಿಜೆಪಿಯ ಕುತಂತ್ರ ಎಂದು ಆರೋಪಿಸಿದ್ದಾರೆ.

ಏನಿದು ಹಗರಣ ?
1,034 ಕೋಟಿ ರೂಪಾಯಿಯ ಪತ್ರಾ ಚಾಲ್‌ ಭೂಕಬಳಿಕೆ ಹಗರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸಂಜಯ್ ರಾವತ್ ಅವರ ಸಹಾಯಕ ಪ್ರವೀಣ್ ರಾವತ್‌ಗೆ ಸಂಬಂಧಿಸಿದ 9 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮತ್ತು ಸಂಜಯ್ ರಾವುತ್ ಅವರ ಪತ್ನಿ ವರ್ಷಾ ಅವರಿಗೆ ಸೇರಿದ ಸುಮಾರು 2 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಈಡಿ ಜಪ್ತಿ ಮಾಡಿತ್ತು. ಪ್ರವೀಣ್ ರಾವತ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈಡಿ ಚಾರ್ಜ್ ಶೀಟ್ ಸಲ್ಲಿಸಿತ್ತು.

ಪತ್ರಾ ಚಾವ್ಲ್ ಭೂ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಈಡಿ ಅಧಿಕಾರಿಗಳು ಫೆಬ್ರವರಿಯಲ್ಲಿ ಪ್ರವೀಣ್ ರಾವತ್ ತನ್ನ ಪತ್ನಿಯ ಖಾತೆಯ ಮೂಲಕ ವರ್ಷಾಗೆ ಅಪರಾಧದ ಆದಾಯದಿಂದ 55 ಲಕ್ಷ ರೂ. ಸಂದಾಯ ಮಾಡಿದ್ದಾರೆ, ಸಂಜಯ್ ರಾವತ್ ಮತ್ತು ಅವರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳ ದೇಶೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಕ್ಕಾಗಿ ಹೋಟೆಲ್ ವಸತಿ ಮತ್ತು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದಾರೆ ಎಂದು ಈಡಿ ಆರೋಪಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!